ಪುತ್ತೂರು, ಡಿ.27 (DaijiworldNews/PY): ಪುತ್ತೂರಿನ ಹಂಟ್ಯಾರ್ ಶಾಲೆಯ ಮತದಾನ ಕೇಂದ್ರದ ಹೊರಗಿನ ಬೂತ್ವೊಂದರಲ್ಲಿ ಅಭ್ಯರ್ಥಿಗಳ ಚಿಹ್ನೆಯ ಪತ್ರ ಹಂಚುತ್ತಿರುವುದು ಕಂಡುಬಂದಿದ್ದು, ಆ ಗುಂಪನ್ನು ವಶಪಡಿಸಿಕೊಳ್ಳಲು ಚುನಾವಣಾಧಿಕಾರಿ ಯತೀಶ್ ಉಳ್ಳಾಲ್ ಅವರು ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಚುನಾವಣಾಧಿಕಾರಿ ಯತೀಶ್ ಉಳ್ಳಾಲ್ ಅವರು ಗ್ರಾ.ಪಂ ಚುನಾವಣೆಯ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ಮಾಡಲು ಬಂದ ಸಂದರ್ಭ ಮತಗಟ್ಟೆಯಲ್ಲಿ ಮತದಾರನ ಕೈಯಲ್ಲಿರುವ ಚೀಟಿಯನ್ನು ಗಮನಿಸಿದ್ದಾರೆ. ಕೂಡಲೇ ಅವರು ಆ ಚೀಟಿಯನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ.
ಈ ವೇಳೆ ಯತೀಶ್ ಉಳ್ಳಾಲ್ ಬೂತ್ನಲ್ಲಿರುವ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಅಲ್ಲದೇ, ಟೇಬಲ್ ಕೆಳಗೆ ಇದ್ದ ಅಭ್ಯರ್ಥಿ ಚಿಹ್ನೆಗಳಿದ್ದ ಚೀಟಿಯ ಒಂದು ಕಟ್ಟನ್ನು ಪತ್ತೆಹಚ್ಚಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ಯತೀಶ್ ಉಳ್ಳಾಲ್, "ಅಭ್ಯರ್ಥಿಗಳ ಚಿಹ್ನೆಗಳಿದ್ದ ಚೀಟಿಯ ಒಂದು ಕಟ್ಟು ಕಂಡುಬಂದಿದೆ. ಇದನ್ನು ವಶಪಡಿಸಿಕೊಳ್ಳಲು ಮತಗಟ್ಟೆಯ ಪರಿಶೀಲನಾಧಿಕಾರಿಗೆ ತಿಳಿಸಿದ್ದೇನೆ" ಎಂದರು.
ಗ್ರಾ.ಪಂ.ಯ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕಿನ 114 ಪಂಚಾಯತ್ಗಳ 1,500 ಗ್ರಾ.ಪಂ ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ, ಕಾರ್ಕಳ ಮತ್ತು ಕಾಪು ತಾಲೂಕುಗಳ 86 ಗ್ರಾಮ ಪಂಚಾಯತ್ನ 1,178 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41, ಉಡುಪಿಯಲ್ಲಿ 65 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.