ಬೆಳ್ತಂಗಡಿ, ಜೂ22: ಪುಟ್ಟ ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ಗೆಳೆಯನನ್ನು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದಲ್ಲಿ ನಡೆದಿದೆ.
ಸುಜಯ್ ಎಂಬ ಪುಟ್ಟ ಬಾಲಕ, ಆದಿತ್ಯ ಎಂಬ ಹುಡುಗನ್ನು ರಕ್ಷಿಸಿದ ಪ್ರಾಣ ಸ್ನೇಹಿತ. ಸುಜಯ್ ಮತ್ತು ಆದಿತ್ಯ ನಿಟ್ಟಡೆ ಗ್ರಾಮದ ಫಂಡಿಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಸುಜಯ್ 5ನೇ ತರಗತಿಯಲ್ಲಿ ಕಲಿಯುತ್ತಿದ್ದರೆ, ಆದಿತ್ಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದ.
ನಿನ್ನೆ ಸಂಜೆ ಸುಜಯ್ ಮತ್ತು ಆದಿತ್ಯ ಶಾಲೆಯಿಂದ ಒಟ್ಟಿಗೆ ಮನೆಗೆ ತೆರಳುತ್ತಿದ್ದರು. ದಂಬೆ ಎಂಬಲ್ಲಿ ತೊರೆಯೊಂದು ಹರಿಯುತ್ತಿದ್ದು, ಇದನ್ನು ದಾಟಿ ಹೋಗಲು ಅಡಿಕೆ ಮರದ ಕಾಲು ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯಲ್ಲಿ ಹೋಗುತ್ತಿದ್ದ ವೇಳೆ ಆದಿತ್ಯನ ಕಾಲು ಜಾರಿದೆ. ತಕ್ಷಣ ಇದನ್ನು ಗಮನಿಸಿದ ಸುಜಯ್ ಆತನನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದಿತ್ಯನ ಒಂದು ಕಾಲನ್ನು ಸುಜಯ್ ಹಿಡಿದುಕೊಂಡು, ಗೆಳೆಯನನ್ನು ಬದುಕಿಸಲು ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದಾನೆ.
ಬಾಲಕರ ಬೊಬ್ಬೆ ಕೇಳಿ ಸ್ಥಳೀಯರಾದ ಜಯಾನಂದ ಸಾಠೆ, ಆದಿತ್ಯನ ತಂದೆ ರತ್ನಾಕರ ಹೆಬ್ಬಾರ್ ತಕ್ಷಣ ಸ್ಥಳಕ್ಕೆ ಬಂದು ಆದಿತ್ಯನನ್ನು ಮೇಲೆತ್ತಿದ್ದಾರೆ. ಸುಮಾರು 4-5 ನಿಮಿಷಗಳ ಕಾಲ ಸುಜಯ್ ಆದಿತ್ಯನನ್ನು ಹಿಡಿದುಕೊಂಡು ಗೆಳೆಯನ ರಕ್ಷಣೆ ಮಾಡಿದ್ದಾನೆ.
ಇದೀಗ ಜೀವದ ಹಂಗು ತೊರೆದು ಬಾಲಕ ಸುಜಯ್, ಗೆಳೆಯನನ್ನು ರಕ್ಷಿಸಿದ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.