ಸುಪ್ರೀತಾ ಸಾಲ್ಯಾನ್, ಪಡು
ರೈತನ ಮಿತ್ರ ಯಾರೆಂದು ಕೇಳಿದಾಗ ಸಾಮಾನ್ಯವಾಗಿ ಎಲ್ಲರ ಉತ್ತರ ಎರೆಹುಳು ಎಂದಾಗಿರುತ್ತದೆ. ಆದರೆ, ನಮಗೆಲ್ಲರಿಗೂ ಅನ್ನ ನೀಡೋ ರೈತನಿಗೆ ಇನ್ನೊಬ್ಬ ಮಿತ್ರನಿದ್ದಾನೆ. ಮಳೆ ಎಂಟ್ರಿ ಕೊಟ್ಟ ನಂತರವಷ್ಟೇ ಈ ಜೀವಿ ಕಾಣ ಸಿಗುತ್ತದೆ. ವಸಂತ ಋತುವಿನಲ್ಲಿ ಗದ್ದೆ ಬದಿಯಲ್ಲಿ ಬೆಳೆದ ಹುಲ್ಲುಗಳ ನಡುವೆ ಕಾಣಿಸಿಕೊಳ್ಳುವ ಈ ಜೀವಿಯ ಹೆಸರು ಮೃದ್ವಂಗಿ.. ಹಳ್ಳಿ ಪ್ರದೇಶದಲ್ಲಿ ವಾಸಿಸುವ ಜನ ಆಡು ಭಾಷೆಯಲ್ಲಿ ಇದನ್ನು ನರ್ತೆ ಎಂದು ಕರೆಯುತ್ತಾರೆ..
ಹಳ್ಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ನರ್ತೆಗಳು ಮಳೆ ಬಂದು ಇಳೆ ತಂಪಾದ ನಂತರ ಹರಿಯುವ ನೀರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ವಿಶೇಷವೆಂದರೆ ಮಳೆಗಾಲ ಹೊರತುಪಡಿಸಿ ಬೇರೆ ದಿನಗಳಲ್ಲಿ ಈ ಜೀವಿಯು ವರ್ಷ ಪೂರ್ತಿ ಮಣ್ಣಿನ ಅಡಿಯಲ್ಲಿ ಇದ್ದು ತನ್ನ ಬದುಕು ಕಟ್ಟಿಕೊಳ್ಳುತ್ತದೆ. ಗದ್ದೆಗಳಲ್ಲಿ ನೀರು ತುಂಬಿದ ತಕ್ಷಣ ಮೇಲೆ ಬರುವ ಈ ಜೀವಿಗಳನ್ನು ಮಳೆಗಾಲದ ಅತಿಥಿ ಎಂದರೂ ತಪ್ಪಗಲಾರದು.. ಕಂದು ಬಣ್ಣವನ್ನು ಹೊಂದಿರುವ ಈ ನರ್ತೆಗಳ ದೇಹ ಶಂಖದ ಆಕೃತಿಯನ್ನು ಹೋಲುತ್ತದೆ. ತನ್ನ ದೇಹದ ರಕ್ಷಣೆಯನ್ನು ಮಾಡಿಕೊಳ್ಳಲು ಈ ಜೀವಿಯು ಮೈ ಮೇಲೆ ಕವಚವನ್ನು ಹೊಂದಿದೆ. ನೀರಿನಲ್ಲಿ ಅತ್ತಿಂದಿತ್ತ ಓಡಾಡುವ ಈ ಜೀವಿ ಮುಟ್ಟಿದ ತಕ್ಷಣ ನಾಚಿ ಅಲ್ಲೇ ತಟಸ್ಥವಾಗುತ್ತದೆ..
ಹೊಲ ಗದ್ದೆಗಳಲ್ಲಿ ತುಂಬಿ ಹರಿದು ಹೋಗುವ ನೀರಿನಲ್ಲಿ ಈ ಮೃದ್ವಂಗಿಗಳು ಕಾಣಸಿಗುತ್ತದೆ. ಕೃಷಿ ಭೂಮಿಯೇ ಈ ನರ್ತೆಗಳಿಗೆ ಆಧಾರ. ಇದು ಕೃಷಿಗೆ ಪೂರಕವಾಗಿಯೂ ಕೆಲಸ ಮಾಡುತ್ತದೆ. ಮಣ್ಣನ್ನೇ ತಿಂದು ಮಣ್ಣಿನಲ್ಲಿಯೇ ಬದುಕುವ ಈ ಜೀವಿಗಳು, ಮಣ್ಣನ್ನು ಮೆದುಗೊಳಿಸುತ್ತದೆ. ಇದರಿಂದ ರೈತನಿಗೆ ಕೃಷಿ ಚಟುವಟಿಕೆಗೆ ಉಪಯೋಗವಾಗುತ್ತದೆ. ಹೀಗಾಗಿಯೇ ಮೃದ್ವಂಗಿಗಳನ್ನು ರೈತನ ಮಿತ್ರ ಎಂದು ಹೇಳುತ್ತಾರೆ.
ಮುಂಗಾರು ಆರಂಭವಾಗುತ್ತಿದ್ದಂತೆ ಈ ಮೃದ್ವಂಗಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಳೆಗಾಲದಲ್ಲಿ ಕರಾವಳಿಗರು ತಿನ್ನುವ ವಿಶಿಷ್ಟ ತಿನಿಸುಗಳಲ್ಲಿ ಈ ಮೃದ್ವಂಗಿಗಳು ಕೂಡ ಒಂದು. ಈ ನರ್ತೆಗಳನ್ನು ಬಳಸಿ ಬೇರೆ ಬೇರೆ ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ನರ್ತೆ ಪುಂಡಿ ಕರಾವಳಿಗರ ಬಲು ಪ್ರಿಯವಾದ ಖಾದ್ಯ. ಜೊತೆಗೆ ಬಸಳೆ, ಸೌತೆ, ಬದನೆಕಾಯಿ ಹೀಗೆ ಬೇರೆ ಬೇರೆ ತರಕಾರಿಗಳ ಜೊತೆಗೆ ಈ ನರ್ತೆಯನ್ನು ಸೇರಿಸಿದ್ರೆ ಅದ್ರ ರುಚಿ ಬೊಂಬಾಟ್..
ಮೃದ್ವಂಗಿಗಳು ಔಷಧಿಯ ಗುಣವನ್ನು ಹೊಂದಿದೆ. ಕೆಲವು ಮೃದ್ವಂಗಿಗಳು ದೊಡ್ಡ ಗಾತ್ರದಲ್ಲಿ ಕಾಣಿಸಿಕೊಂಡರೆ, ಇನ್ನೂ ಕೆಲವು ಸಣ್ಣ ಗಾತ್ರದಲ್ಲಿ ಇರುತ್ತದೆ. ದೊಡ್ಡ ಗಾತ್ರದಲ್ಲಿದ್ದರೆ ಅದನ್ನು ನರ್ತೆ ಎಂದೂ, ಸಣ್ಣ ಗಾತ್ರದಲ್ಲಿದ್ದರೆ ಗುಳ್ಳ ಎಂದು ಕರೆಯುತ್ತಾರೆ. ಬಹಳ ವರುಷಗಳ ಹಿಂದೆ ಬೆನ್ನು ನೋವಿಗೆ ಇದೇ ಮದ್ದಾಗಿತ್ತು.. ಈಗಲೂ ಹಳ್ಳಿ ಜನ ಬೆನ್ನು ನೋವಿಗೆ ಈ ಜೀವಿಯ ಖಾದ್ಯ ಸೇವಿಸುತ್ತಾರೆ. ಮೃದ್ವಂಗಿಯ ಖಾದ್ಯ ತಿಂದರೆ ಬೆನ್ನು ನೋವು ಶಮನವಾಗುತ್ತದೆ ಎನ್ನುತ್ತಾರೆ ನಾಟಿ ವೈದ್ಯರು.
ಆದರೆ ಇತ್ತೀಚಿನ ದಿನಗಳಲ್ಲಿ ಮೃದ್ವಂಗಿಗಳು ಅಪರೂಪದ ಜೀವಿಗಳಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಮಾತ್ರ ಈಗಲೂ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಮಳೆಗಾಲ ಬತ್ತೆಂದರೆ ಸಾಕು ಹಳ್ಳಿಯಲ್ಲಿ ಜನ ಇದಕ್ಕೆಂದು ಕಾದು, ಗದ್ದೆ ಬದಿಗಳಲ್ಲಿ ನರ್ತೆ ಹೆಕ್ಕುವುದರಲ್ಲಿ ಬ್ಯುಸಿಯಾಗಿ ಬಿಡುತ್ತಾರೆ.