ಉಡುಪಿ, ಡಿ. 28 (DaijiworldNews/MB) : ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುವ ನಗರದ ಇಂದಿರಾನಗರದ ಕುಕ್ಕಿಕಟ್ಟೆ ನಿವಾಸಿ ರಕ್ಷಾ (26) ಅವರ ಸಾವಿನ ಪ್ರಕರಣದ ತನಿಖೆಯು ಆಮೆ ನಡಿಗೆಯಲ್ಲಿ ನಡೆಯುತ್ತಿದೆ. ಈ ಪ್ರಕರಣ ನಡೆದು ನಾಲ್ಕು ತಿಂಗಳು ಕಳೆದರೂ ಕೂಡಾ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಪೊಲೀಸರಿಗೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಇದಲ್ಲದೆ, ಈ ಪ್ರಯೋಗಾಲಯದ ವರದಿಗೆ ಸಂಬಂಧಿಸಿದಂತೆ ರಕ್ಷಾ ಅವರ ಪತಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪವೂ ಇದೆ.

ರಕ್ಷಾ ಸಾವಿನ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದರಿಂದ ಪ್ರಕರಣದ ತನಿಖೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಿಒಡಿಗೆ ಹಸ್ತಾಂತರಿಸಿದ್ದರು.
ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದ ರಕ್ಷಾ ಅವರನ್ನು ಆಗಸ್ಟ್ 21 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದ ಔಷಧಿ ತೆಗೆದುಕೊಂಡ ನಂತರ ಅವರು ಒಂದು ಗಂಟೆಯೊಳಗೆ ನಿಧನರಾದರು.
ಮಾತ್ರೆ ತೆಗೆದುಕೊಂಡ ಬಳಿಕ ಸ್ಪಂಧಿಸದ ಆಕೆಯನ್ನು ಅದೇ ಆಸ್ಪತ್ರೆಗೆ ಮತ್ತೆ ಕರೆ ತಂದಾಗ, ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಕರ್ತವ್ಯದಲ್ಲಿದ್ದ ವೈದ್ಯರು ಕುಟುಂಬ ಸದಸ್ಯರಿಗೆ ಹೇಳಿದ್ದರು. ಬೇರೆ ಖಾಸಗಿ ಆಸ್ಪತ್ರೆಗೆ ರಕ್ಷಾರನ್ನು ಕರೆದೊಯ್ಯಲಾಗಿದ್ದು ಆ ಆಸ್ಪತ್ರೆಯಲ್ಲಿ ವೈದ್ಯರು ರಕ್ಷಾ ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ಅವರ ಮೃತ ದೇಹವನ್ನು ಆ ಖಾಸಗಿ ಆಸ್ಪತ್ರೆಯಿಂದ ಅಜ್ಜರಕಾಡು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿತ್ತು. ಈ ಸಾವಿಗೆ ಮೊದಲ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, "ಪರಿಣಿತ ವೈದ್ಯರ ತಂಡವು ರಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿಯನ್ನು ನನಗೆ ಸಲ್ಲಿಸಿದೆ. ಆದರೆ ತನಿಖೆಯನ್ನು ಸಿಒಡಿಗೆ ಹಸ್ತಾಂತರಿದ ಬಳಿಕ ತನಿಖೆಯನ್ನು ಸಿಒಡಿಗೆ ಹಸ್ತಾಂತರಿಸಲಾಗಿದೆ. ಸಿಒಡಿ ತನಿಖೆ ಪ್ರಗತಿಯಲ್ಲಿದೆ" ಎಂದು ಹೇಳಿದರು.
ಮೃತ ರಕ್ಷಾ ಅವರ ಪತಿ ಶಿವಪ್ರಸಾದ್, "ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ ನಮಗೆ ನ್ಯಾಯ ದೊರೆತಿಲ್ಲ. ಪ್ರಯೋಗಾಲಯದ ವರದಿಯ ಬಗ್ಗೆ ನಾನು ಸಿಒಡಿ ತಂಡವನ್ನು ಕೇಳಿದಾಗ, ಅವರು ಒಂದು ವಾರ ಅಥವಾ 15 ದಿನದಲ್ಲಿ ಬರುತ್ತಾರೆ ಎಂದು ಹೇಳಿ ನುಣುಚಿಕೊಳ್ಳುತ್ತಾರೆ. ಆದರೂ ವರದಿ ಇನ್ನೂ ಬಂದಿಲ್ಲ. ಜಿಲ್ಲಾಧಿಕಾರಿ ಸಿಒಡಿಯತ್ತ ಬೆರಳು ತೋರಿಸುತ್ತಾರೆ. ಒಟ್ಟಿನಲ್ಲಿ ನಮಗೆ ಇನ್ನೂ ನ್ಯಾಯ ದೊರೆತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.