ಕುಂದಾಪುರ, ಡಿ.28 (DaijiworldNews/HR): ಮನೆ ಮನೆಗೆ ತೆರಳಿ ಗೋಮಾಂಸ ಮಾರುತ್ತಿದ್ದ ವ್ಯಕ್ತಿಯನ್ನು ಸೋಮವಾರದಂದು ಪೊಲೀಸರು ಬಂಧಿಸಿದ ಘಟನೆ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಮೀನು ಮಾರುಕಟ್ಟೆಯ ಬಳಿ ನಡೆದಿದೆ.

ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಅಬ್ದುಲ್ ರಹೀಂ (30) ಎಂದು ಗುರುತಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭೀಮಾಶಂಕರ್ ಮತ್ತು ಹೆಡ್ ಕಾನ್ಸ್ಟೆಬಲ್ ಗಿರೀಶ್ ಅವರು ಗಂಗೊಳ್ಳಿ ಮಾರುಕಟ್ಟೆಯ ಬೀಟ್ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೀನು ಮಾರುಕಟ್ಟೆಯ ಬಳಿ ಅಬ್ದುಲ್ ರಹೀಂ ಅವರು ಮನೆ-ಮನೆಗೆ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಅಬ್ದುಲ್ ರಹೀಂ ತನ್ನೊಂದಿಗೆ ಸಾಗಿಸುತ್ತಿದ್ದ ನಾಲ್ಕು ಕಿಲೋಗ್ರಾಂಗಳಷ್ಟು ಮಾಂಸವನ್ನು ಪತ್ತೆಹಚ್ಚಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.