ಬಂಟ್ವಾಳ, ಜೂ23: ಇಲ್ಲಿನ ಬಡ್ಡಕಟ್ಟೆಯಲ್ಲಿ ಸಿನೀಮಿಯ ರೀತಿಯಲ್ಲಿ ತಲವಾರು ಝಳಪಿಸಿ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಸಿದಲ್ಲದೆ, ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಬಂಟ್ವಾಳ್ ಗೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಬಂಟ್ವಾಳ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಬಂಧಿತ ಇನ್ನಿಬ್ಬರು ಆರೋಪಿಗಳಾದ ಸತೀಶ್ ಕುಲಾಲ್ ಹಾಗೂ ಪ್ರಥ್ವಿರಾಜ್ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಆರೋಪಿಗಳಾದ ಸುರೇಂದ್ರ, ಸತೀಶ್, ಪ್ರಥ್ವಿರಾಜ್ ನನ್ನು ಗುರುವಾರ ರಾತ್ರಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ನಿವೇದನೆಯಂತೆ ಆರೋಪಿ ಸುರೇಂದ್ರನಿಗೆ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮಂಗಳೂರಿನ ಡಿಸಿಐಬಿ ತಂಡ ಹಾಗೂ ಬಂಟ್ವಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಂಗಳೂರಿನ ಪಚ್ಚಿನಡ್ಕ ಎಂಬಲ್ಲಿ ಸುರೇಂದ್ರ ಮತ್ತು ಸತೀಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಘಟನೆಯ ಬಳಿಕ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಅರೋಪದಲ್ಲಿ ಪೃಥ್ವಿರಾಜ್ ಜೆ. ಶೆಟ್ಟಿಯನ್ನು ಕುಂಬ್ಳೆಯಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.