ಮಂಗಳೂರು, ಡಿ. 29 (DaijiworldNews/MB) : ಇಲ್ಲಿನ ನರ್ಸಿಂಗ್ ಕಾಲೇಜಿನ ಹದಿನೈದು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನರ್ಸಿಂಗ್ ಕಾಲೇಜುಗಳು ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದೆ ತರಗತಿಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ. ಎರಡು ಸಿಟಿ ನರ್ಸಿಂಗ್ ಕಾಲೇಜುಗಳು ಹಾಗೂ ರುಕ್ಮಿಣಿ ಶೆಟ್ಟಿ ಸ್ಮಾರಕ ನರ್ಸಿಂಗ್ ಕಾಲೇಜು ಕೊರೊನಾ ನಿಯಮಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ. ಈ ಕಾಲೇಜುಗಳಿಗೆ ಸರ್ಕಾರವು ಈಗ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

ಜನವರಿ 1 ರಿಂದ ತರಗತಿಗಳು ಪ್ರಾರಂಭವಾಗಲಿವೆ ಎಂದು ತಿಳಿದ ನಂತರ 613 ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದರು. ಈ ಪೈಕಿ 200 ವಿದ್ಯಾರ್ಥಿಗಳು ಕೊರೊನಾ ನೆಗೆಟಿವ್ ವರದಿ ಹೊಂದಿದ್ದರು. ಆದರೆ ಉಳಿದವರಿಗೆ ಕೊರೊನಾ ವರದಿಯಿಲ್ಲದೆಯೇ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಇಲ್ಲಿನ ಆರೋಗ್ಯ ಇಲಾಖೆಯು ಉಳಿದ ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ 15 ಮಂದಿ ಕೊರೊನಾ ದೃಢಪಟ್ಟಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ಘಟನೆಯ ಹಿನ್ನೆಲೆ ಆರೋಗ್ಯ ಇಲಾಖೆ ಎಲ್ಲಾ ನರ್ಸಿಂಗ್ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ತರಗತಿಗಳು ಪ್ರಾರಂಭವಾಗುವ 72 ಗಂಟೆಗಳ ಒಳಗೆ ಕೊರೊನಾ ಪರೀಕ್ಷೆ ನಡೆಸಿದ ನೆಗೆಟಿವ್ ವರದಿ ವಿದ್ಯಾರ್ಥಿ ಹೊಂದಿರಬೇಕು ಎಂದು ತಿಳಿಸಿದೆ. ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಕೂಡ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ಈ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.