ಬಂಟ್ವಾಳ, ಡಿ. 29 (DaijiworldNews/MB) : ಸ್ಥಳೀಯ ವ್ಯಕ್ತಿಗಳ ದ್ವೇಷದಿಂದಾಗಿ ರೈತರೊಬ್ಬರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಕಹಿ ಅನುಭವವಾಗಿದೆ. ತಹಶೀಲ್ದಾರ, ಅಧಿಕಾರಿಗಳಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಿದರೂ ಕೂಡಾ ಎಲ್ಲವೂ ವ್ಯರ್ಥವಾಗಿದೆ. ಕೃಷಿಯ ಮೂಲಕವೇ ಜೀವನ ಸಾಗಿಸುತ್ತಿದ್ದ ರೈತರೊಬ್ಬರ ಬೆಳೆಯು ಮಣ್ಣು ಪಾಲಾಗಿದ್ದು ಈಗ ಹೋರಾಟವೊಂದೇ ಹಾದಿ ಎಂಬ ಪರಿಸ್ಥಿತಿ ಎದುರಾಗಿದೆ.



ರೈತರ ಕೃಷಿ ಬೆಳೆಯನ್ನು ಉಳಿಸಲು ಸರ್ಕಾರ ಹಲವಾರು ರೀತಿಯಲ್ಲಿ ನೆರವಾಗುತ್ತಿದೆ. ಆದರೆ ಇಲ್ಲೊಬ್ಬ ರೈತ ಕಳೆದ ಹಲವಾರು ವರ್ಷಗಳಿಂದ ಭತ್ತದ ಬೇಸಾಯವನ್ನು ನಡೆಸುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಈ ರೈತ ಬೆಳೆದ ಬೆಳೆಯು ಮಣ್ಣು ಪಾಲಾಗುತ್ತಿದೆ.
ಸ್ಥಳೀಯ ವ್ಯಕ್ತಿಯ ದ್ವೇಷದ ಕಾರಣದಿಂದಾಗಿ ಈ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಎದುರಾಗಿದೆ. ಆದರೆ ತಹಶೀಲ್ದಾರ ಅಧಿಕಾರಿಗಳಿಗೆ ಈ ಬಗ್ಗೆ ಮನವಿಯನ್ನು ನೀಡಿದರೂ ಕೂಡಾ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದೆ.
ಬಂಟ್ವಾಳ ಗ್ರಾಮದ ಬಾಳ್ತಿಲ ಗ್ರಾಮದ ಕೋರಿಯ ನಿವಾಸಿ ನೀಲಮ್ಮರವರ ಹೆಸರಿನಲ್ಲಿ ಅವರ ಮನೆಯ ಮುಂಭಾಗ ಸುಮಾರು ಒಂದೂವರೆ ಎಕರೆ ಗದ್ದೆಯಿದೆ. ಅವರ ಪತಿ ಮುತ್ತಾಪ್ಪನವರು ಬೇಸಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕುಟುಂಬವು ತನ್ನ ಜೀವಾನೂಪಾಯಕ್ಕಾಗಿ ಒಂದುವರೆ ಎಕರೆ ಭೂಮಿಯಲ್ಲಿ ಭತ್ತದ ಬೇಸಾಯ ಮಾಡಿಕೊಂಡು ಬಂದಿದೆ. ಆದರೆ ಸ್ಥಳೀಯ ವ್ಯಕ್ತಿಗಳ ಉಪಟಳದಿಂದಾಗಿ ಮುತ್ತಪ್ಪ ಅವರಿಗೆ ಭತ್ತದ ಫಸಲು ದೊರೆಯುತ್ತಿಲ್ಲ.
ಎಂಟು ವರ್ಷಗಳಿಂದ ಇವರ ಮನೆಯ ಸಮೀಪ ಇಬ್ಬರು ವ್ಯಕ್ತಿಗಳು ಕಪ್ಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಗಣಿಗಾರಿಕೆ ವೇಳೆ ಭಾರೀ ಸ್ಪೋಟಕಗಳನ್ನು ಸಿಡಿಸುತ್ತಿದ್ದು ಈ ವೇಳೆ ಮುತ್ತಪ್ಪ ಅವರ ಮನೆ ಬಿರುಕು ಬಿಟ್ಟಿತ್ತು. ಮನೆ ಶಿಥಿಲಗೊಂಡು ಬೀಳುವ ಹಂತದಲ್ಲಿತ್ತು. ಇವರಿಗಷ್ಟೇ ಅಲ್ಲದೇ ಸುತ್ತಮುತ್ತಲಿನ ಪ್ರದೇಶದವರಿಗೂ ತೊಂದರೆ ಉಂಟಾಗಿತ್ತು. ಮಾನಸಿಕವಾಗಿ ನೊಂದ ಮುತ್ತಪ್ಪರವರ ಕುಟುಂಬ ಗಣಿಗಾರಿಕೆ ನಿಲ್ಲಿಸುವಂತೆ ಮನವಿಯನ್ನು ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಬಂಟ್ವಾಳ ತಹಶೀಲ್ದಾರ್ ಅವರಿಗೆ ಈ ಕುಟುಂಬ ದೂರನ್ನು ಸಲ್ಲಿಸಿತ್ತು. ಅದರಂತೆ ಅವರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದರು.
ಈ ದ್ವೇಷದ ಪರಿಣಾಮ ಮುತ್ತಪ್ಪರವರು ಬೆಳೆಯುತ್ತಿರುವ ಭತ್ತದ ಕೃಷಿಯ ಮೇಲಾಗುತ್ತಿದೆ. ಮುತ್ತಪ್ಪ ಅವರ ಗದ್ದೆಯ ಇಕ್ಕೆಲಗಳಲ್ಲಿ ಹರಿಯುವ ತೋಡಿಗೆ ಮಣ್ಣು ಹಾಕಿ ತೋಡನ್ನು ಮುಚ್ಚಿದ್ದಾರೆ. ಇದರಿಂದ ಮಳೆಗಾಲದಲ್ಲಿ ಗುಡ್ಡಗಳಿಂದ ಬರುವ ನೀರು ನೇರವಾಗಿ ಮುತ್ತಪ್ಪ ಅವರ ಗದ್ದೆಗೆ ನುಗ್ಗಿದೆ. ಇದರಿಂದ ಗದ್ದೆ ತೋಡಿನಂತಾಗಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ಮಣ್ಣುಪಾಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಅಲ್ಲಿಂದ ಉತ್ತರ ಬಂದಿಲ್ಲ. ಬಳಿಕ ಎಸಿ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಉಅಪಯೋಗವೆಣಿಸಿಲ್ಲ. ಇದರಿಂದಾಗಿ ನೊಂದುಕೊಂಡಿರುವ ರೈತ ಮುತ್ತಪ್ಪ ಇದೀಗ ಹೋರಾಟದ ಹಾದಿ ತುಳಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುತ್ತಪ್ಪರವರು, ''ನಮ್ಮ ಪ್ರದೇಶದ ಸಮೀಪ ಕಲ್ಲುಕೋರೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಸುಮಾರು ಏಳೆಂಟು ವರ್ಷದಿಂದ ನಡೆಸುತ್ತಿದ್ದರು. ಕಾಲಕ್ರಮೇಣ ನಮ್ಮ ಜಾಗದಲ್ಲೂ ಕಲ್ಲು ತೆಗೆಯಲು ಆರಂಭ ಮಾಡಿದರು. ಆ ಸಂದರ್ಭ ನಾವು ನಮ್ಮ ಜಾಗದಲ್ಲಿ ಯಾಕೆ ಕಲ್ಲು ತೆಗೆಯುತ್ತಿದ್ದೀರಿ ಎಂದು ಕೇಳಿದ್ದು ಅವರು ಅದು ಅಲ್ಲಿ ಕಲ್ಲುಕೋರೆ ನಡೆಸುತ್ತಿರುವ ವಸಂತ ಎಂಬವರ ಜಾಗ ಎಂದು ಹೇಳಿದ್ದಾರೆ. ನಾವು ದೂರು ಕೊಡುವುದಾಗಿ ಹೇಳಿದೆವು. ತಹಶೀಲ್ದಾರರಿಗೆ ದೂರು ನೀಡಿದ ಹಿನ್ನೆಲೆ ತಹಶೀಲ್ದಾರರು ಕಲ್ಲುಕೋರೆಯನ್ನು ಸ್ಥಗಿತಗೊಳಿಸಿದರು. ಬಳಿಕ ಅದರ ದ್ವೇಷದಿಂದಾಗಿ ಅವರು ಸಮೀಪದ ತೋಡನ್ನು ಮುಚ್ಚಿದ್ದಾರೆ. ಇದರಿಂದಾಗಿ ನಮ್ಮ ಬೆಳೆಗೆ ಹಾನಿಯಾಗಿದೆ. ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ. ವೈಯಕ್ತಿಕ ವಿಚಾರವೆಂದು ಎಲ್ಲರೂ ಹೇಳುತ್ತಾರೆ. ಆದರೆ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ'' ಎಂದು ತಿಳಿಸಿದ್ದಾರೆ.