ಕಾಸರಗೋಡು, ಡಿ. 29 (DaijiworldNews/MB) : ಡಿವೈಎಫ್ಐ ಕಾರ್ಯಕರ್ತ ಕಲ್ಲೂರಾವಿಯ ಅಬ್ದುಲ್ ರಹಮಾನ್ ಔಫ್ರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದ್ದು, ತನಿಖಾ ತಂಡದ ಮುಖ್ಯಸ್ಥ ಕೆ. ಕೆ. ಮೊಯಿದಿನ್ ಕುಟ್ಟಿ, ಡಿವೈಎಸ್ಪಿ ಪಿ.ಕೆ ದಾಮೋದರನ್, ಇನ್ಸ್ಪೆಕ್ಟರ್ ಸಿ.ಎ ಅಬ್ದುಲ್ ರಹಿಂ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ.

ಕೃತ್ಯದಲ್ಲಿ ಸಂಚು ನಡೆದಿದೆಯೇ, ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪ್ರಮುಖವಾಗಿ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಪ್ರಮುಖ ಆರೋಪಿಯಾಗಿರುವ ಇರ್ಷಾದ್ನನ್ನು ಮತ್ತೆ ಕಸ್ಟಡಿಗೆ ಪಡೆಯಲು ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಕೃತ್ಯಕ್ಕೆ ಬಳಸಿದ್ದ ಮಾರಕಾಯುಧವನ್ನು ಪತ್ತೆ ಹಚ್ಚಬೇಕಿದೆ. ಮಾರಕಾಯುಧವನ್ನು ಕೃತ್ಯ ನಡೆಸಿದ ಸ್ಥಳದ ಪರಿಸರದಲ್ಲಿ ಎಸೆದಿರುವುದಾಗಿ ಬೇಕಲ ಪೊಲೀಸರ ವಿಚಾರಣೆ ವೇಳೆ ಇರ್ಷಾದ್ ಬಾಯ್ಬಿಟ್ಟಿದ್ದನು. ಇದೀಗ ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿರುವುದರಿಂದ ಮಾರಕಾಯುಧ ಪತ್ತೆಗೆ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಕೊಲೆಗೆ ಸಂಬಂಧಪಟ್ಟಂತೆ ಈಗಾಗಲೇ ಇರ್ಷಾದ್, ಆಶೀರ್ ಮತ್ತು ಹಸನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನಷ್ಟು ಆರೋಪಿಗಳಿದ್ದಾರೆಯೇ ಅಥವಾ ಬೇರೆ ಯಾರದಾದರೂ ನೆರವು ಲಭಿಸಿತ್ತೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಸೈಬರ್ ಸೆಲ್ನ ನೆರವು ಕೋರಲಾಗಿದೆ.