ಉಡುಪಿ, ಡಿ. 30 (DaijiworldNews/MB) : ಜನವರಿ 1 ರಿಂದ 6, 7, 8 ಮತ್ತು 9 ತರಗತಿಗಳಿಗೆ ವಿದ್ಯಾಗಮ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ತರಗತಿಗತಿಗಳು ಪ್ರಾರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಕಾನ್ಫೆರೆನ್ಸ್ ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ನವೀನ್ ಭಟ್ ಹೇಳಿದರು.


"ಎಲ್ಲಾ ಐದು ವಲಯಗಳಲ್ಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಆಸನಗಳು, ಶೌಚಾಲಯಗಳು ಮತ್ತು ಕ್ಯಾಂಪಸ್ ಸೇರಿದಂತೆ ಶಾಲೆಗಳ ಒಳಗೆ ಮತ್ತು ಹೊರಗೆ ಸ್ವಚ್ಛ ಗೊಳಿಸಲಾಗುತ್ತಿದೆ. ಮಾರ್ಗಸೂಚಿಯ ಪ್ರತಿಯನ್ನು ಎಲ್ಲಾ ಪೋಷಕರಿಗೆ ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ. ಶಾಲೆಗಳನ್ನು ಅಲಂಕರಿಸುವ ಮೂಲಕ ಹಾಗೂ ಮನರಂಜನಾ ಚಟುವಟಿಕೆಗಳನ್ನು ನಡೆಸುವ ಮೂಲಕ ಜನವರಿ 1 ರಂದು ಶಾಲೆಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆಯು ಯೋಜಿಸಿದೆ. ಈ ಬಗ್ಗೆ ಶಾಲೆಯ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇವೆ" ಎಂದು ತಿಳಿಸಿದರು.
"ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಅರ್ಧ ದಿನದ ತರಗತಿ ಇರುತ್ತದೆ. ಎರಡು ಗುಂಪುಗಳಾಗಿ ತರಗತಿಗಳು ನಡೆಯಲಿವೆ. ಪ್ರತಿ ಗುಂಪಲ್ಲಿ 15-20 ವಿದ್ಯಾರ್ಥಿಗಳು ಇರುತ್ತಾರೆ. ಆರನೇ ಮತ್ತು ಏಳನೇ ತರಗತಿಯ ವಿದ್ಯಾಗಮ ತರಗತಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಎಂಟನೇ ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ನಡೆಯಲಿದೆ. ಶಾಲೆಯಲ್ಲಿ ನೀರು ಸರಬರಾಜು ಮತ್ತು ವಿದ್ಯುತ್ ಸಂಪರ್ಕ ಮತ್ತು ಇತರ ಮೂಲಸೌಕರ್ಯಗಳ ವ್ಯವಸ್ಥೆ ಸರಿಯಾಗಿರಬೇಕು. ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಎಲ್ಲರಿಗೂ ತಿಳಿಸಲು ಪ್ರತಿ ಶಾಲೆಯಲ್ಲಿ ಮಾರ್ಗದರ್ಶಕರನ್ನು ನೇಮಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ನೀರನ್ನು ತರಬೇಕು. ಇಲ್ಲದಿದ್ದರೆ ಶಾಲೆಯು ವಿದ್ಯಾರ್ಥಿಗಳಿಗೆ ಬಿಸಿನೀರನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು. ಶಾಲೆಗಳಲ್ಲಿ ಪ್ರತ್ಯೇಕ ಕೋಣೆಯನ್ನು ಗುರುತಿಸಲಾಗಿದೆ. ಸಾಮೂಹಿಕ ಪ್ರಾರ್ಥನೆ ಅಥವಾ ಯಾವುದೇ ಕ್ರೀಡೆಗಳನ್ನು ನಡೆಸದಂತೆ ಸೂಚನೆ ನೀಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರು ಮುಖಕ್ಕೆ ಶೀಲ್ಡ್ ಧರಿಸಬೇಕು. ಉಳಿದ ಎಲ್ಲರಿಗೂ ಮಾಸ್ಕ್ ಕಡ್ಡಾಯ. ಶಿಕ್ಷಕರಿಗೆ ಕೊರೊನಾ ಪರೀಕ್ಷಾ ವರದಿ ಡ್ಡಾಯವಾಗಿದೆ. ಯಾವುದೇ ರೋಗಲಕ್ಷಣ ಹೊಂದಿರುಗ ವಿದ್ಯಾರ್ಥಿಯು ಆರೋಗ್ಯ ಪ್ರಮಾಣಪತ್ರ ಅಥವಾ ಪೋಷಕರಿಂದ ಅನುಮತಿ ಪತ್ರವನ್ನು ತರಬೇಕು. ಶಾಲಾ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
6 ರಿಂದ 9 ನೇ ತರಗತಿ ಹೊಂದಿರುವ ಒಟ್ಟು 467 ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 23,901 ಮತ್ತು ಒಟ್ಟು ಶಿಕ್ಷಕರ ಸಂಖ್ಯೆ 2,589 ಆಗಿದೆ. ವಿದ್ಯಾಗಮ ತಂಡಗಳ ಒಟ್ಟು ಸಂಖ್ಯೆ 1,593 ಆಗಿದೆ. ಜಿಲ್ಲೆಯಲ್ಲಿ ಒಟ್ಟು 228 ಅನುದಾನಿತ ಶಾಲೆಗಳಿದ್ದು ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 11,200 ಮತ್ತು ಒಟ್ಟು ಶಿಕ್ಷಕರ ಸಂಖ್ಯೆ 783 ಇದೆ. ಒಟ್ಟು 747 ವಿದ್ಯಾಗಮ ತಂಡಗಳಿವೆ. ಜಿಲ್ಲೆಯಲ್ಲಿ ಒಟ್ಟು 175 ಅನುದಾನ ರಹಿತ ಶಾಲೆಗಳಿವೆ. ಈ ಶಾಲೆಯಲ್ಲಿ ಒಟ್ಟು 28,704 ವಿದ್ಯಾರ್ಥಿಗಳಿದ್ದು 2,685 ಶಿಕ್ಷಕರು ಇದ್ದಾರೆ. ವಿದ್ಯಾಗಮ ತಂಡದಲ್ಲಿ 1,914 ಮಂದಿ ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಡಿಪಿಐ ಎನ್.ಎಚ್. ನಾಗೂರು ಮತ್ತು ಇತರರು ಉಪಸ್ಥಿತರಿದ್ದರು.