ಬ್ರಹ್ಮಾವರ, ಡಿ. 30 (DaijiworldNews/MB) : ಎಂಟು ವರ್ಷದ ಬಾಲಕಿಗೆ ತಾಯಿಯೇ ನಿರ್ದಯವಾಗಿ ಥಳಿಸಿರುವ ಘಟನೆ ಬ್ರಹ್ಮಾವರದ ಹೆರೂರಿನಲ್ಲಿ ನಡೆದಿದೆ. ಚಿಕೋಡಿಯ ಕುಟುಂಬವೊಂದು ವಾಸಿಸುತ್ತಿರುವ ಹೆರೂರು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣದಿಂದ ಎಂಟು ವರ್ಷದ ಬಾಲಕಿಗೆ ಕ್ರೂರವಾಗಿ ಥಳಿಸುವುದನ್ನು ಗಮನಿಸಿದ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಂತೋಷ್ ಎಂಬ ವ್ಯಕ್ತಿಯು ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ್ದಾರೆ.
ಘಟಕದ ಕಾನೂನು ನಿರ್ವಾಹಕ ಅಧಿಕಾರಿ ಪ್ರಭಾಕರ್ ಆಚಾರ್ ಮತ್ತು ಬ್ರಹ್ಮಾವರ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಲೀಲಾವತಿ ಅವರೊಂದಿಗೆ ವನಿತಾ ಹೆಗ್ಡೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಅವರ ಸೂಚನೆಯ ಮೇರೆಗೆ ಬಾಲಕಿಯನ್ನು ನಿಟ್ಟೂರಿನ ಬಾಲ ಮಂದಿರ ಕೇಂದ್ರಕ್ಕೆ ದಾಖಲಿಸಲಾಗಿದೆ.