ಬಂಟ್ವಾಳ, ಜೂ23: ಕಳೆದ ಮೂರು ತಿಂಗಳಿನಿಂದ ವೇತನ ಸಿಗದೆ ಕಂಗಾಲಾಗಿದ್ದ ಬಂಟ್ವಾಳ ತಾಲೂಕಿನ ಸುಮಾರು 132 ಶಿಕ್ಷಕರ ಮುಖದಲ್ಲಿ ಶಾಸಕ ಯು. ರಾಜೇಶ್ ನಾಯ್ಕ್ ಅವರ ಪ್ರಯತ್ನದ ಫಲವಾಗಿ ಕೊನೆಗೂ ಮಂದಹಾಸ ಮೂಡಿದೆ.
ಬಂಟ್ವಾಳ ತಾಲೂಕಿನ ಸರ್ವ ಶಿಕ್ಷಣ ಅಭಿಯಾನದಡಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಶಾಸಕ ಯು. ರಾಜೇಶ್ ನಾಯ್ಕ್ ಅವರ ಪ್ರಯತ್ನದ ಫಲವಾಗಿ ಮೂರು ತಿಂಗಳ ವೇತನ ಕೈ ಸೇರುವಂತಾಗಿದೆ. ತಾಲೂಕಿನಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಕರ್ತವ್ಯ ನಿರ್ವಹಿಸುವ ಎಸ್.ಎಸ್.ಎ ಪ್ರೌಢಶಾಲಾ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕೆರು, ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ, ಬಿ.ಐ.ಆರ್.ಟಿ ಶಿಕ್ಷಕರು ಸೇರಿದಂತೆ 132 ಶಿಕ್ಷಕರಿಗೆ ಕಳೆದ ಮಾರ್ಚ್ ತಿಂಗಳಿನಿಂದ ವೇತನ ಸಿಗದೆ ಸಂಕಷ್ಟ ಅನುಭವಿಸಿದ್ದರು.
ಅಧಿಕಾರಿಗಳ ಎಡವಟ್ಟು ಮತ್ತು ತಾಂತ್ರಿಕ ತೊಂದರೆಯಿಂದ ವೇತನ ತೊಂದರೆಗಳಾಗಿದ್ದು, ಸರ್ವ ಶಿಕ್ಷಣ ಅಭಿಯಾನದ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಸಕ ಯು.ರಾಜೇಶ್ ನಾಯ್ಕ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು, ತಕ್ಷಣ ಸಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರು. ಬಳಿಕ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಈ ಬಗ್ಗೆ ಗಮನಹರಿಸಿದ್ದರು. ಇದಾದ ಎರಡೇ ದಿನದಲ್ಲಿ ಸರ್ವಶಿಕ್ಷಣ ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ವೇತನ ಕೈ ಸೇರಿದೆ.
ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿದ ಶಾಸಕ ಯು.ರಾಜೇಶ್ ನಾಯ್ಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಂಘದ ರಾಜ್ಯಾಧ್ಯಕ್ಷ ಗಂಗಾಧರ ಮೂರ್ತಿ ಸಹಿತ ಪರೋಕ್ಷವಾಗಿ ಸ್ಪಂದಿಸಿದ ಎಲ್ಲರಿಗೂ ಸರ್ವಶಿಕ್ಷಣ ಅಭಿಯಾನದ ಪ್ರೌಢ ಶಾಲಾ ಶಿಕ್ಷಕರ ಸಂಘ ಕೃತಜ್ಙತೆ ಸಲ್ಲಿಸಿದೆ.