ಜೂ, 24: ಕಪ್ಪಗಿದ್ದೀಯ ಎಂದು ಹೀಯಾಳಿಸಿತ್ತಿರುವವರ ಮೇಲೆ ಸೇಡು ತೀರಿಸಿಕೊಳ್ಳಲು ಊಟದಲ್ಲಿ ವಿಷವಿಕ್ಕಿ ಮಹಿಳೆಯೊಬ್ಬಳು ಐವರನ್ನು ಕೊಂದ ಘಟನೆ ಮಹರಾಷ್ಟ್ರದ ಮಹಾಡ್ ಗ್ರಾಮದಲ್ಲಿ ನಡೆದಿದೆ.ಆರೋಪಿಯನ್ನು ಜ್ಯೋತಿ ಸುರೇಶ್ ಸುರ್ವಾಸೆ ಎಂದು ಹೆಸರಿಸಲಾಗಿದೆ.
ಜ್ಯೋತಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಈಕೆಯನ್ನು ಗಂಡನ ಮನೆಯವರು ಕಪ್ಪಗಿದ್ದಾಳೆ, ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಹೀಯಾಳಿಸುತ್ತಿದ್ದರು. ಆದ್ದರಿಂದ ಸಿಟ್ಟಿಗೆದ್ದ ಜ್ಯೋತಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ತಮ್ಮ ಸಂಬಂಧಿಕರು ಹಮ್ಮಿಕೊಂಡಿದ್ದ ಪಾರ್ಟಿಯ ಊಟದಲ್ಲಿ ಕ್ರಿಮಿನಾಶಕ ಬೆರೆಸಿದ್ದಾಳೆ. ಪಾರ್ಟಿಗೆ ಬಂದವರು ಈ ವಿಷಪೂರಿತ ಆಹಾರ ಸೇವಿಸಿದ ಪರಿಣಾಮ 5 ಜನ ಮೃತಪಟ್ಟಿದ್ದು, 120 ಜನರು ಅಸ್ವಸ್ಥಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹಿಳೆ ಜ್ಯೋತಿ ಸುರೇಶ್ ಸುರ್ವಾಸೆಯನ್ನು ಬಂಧಿಸಿದ್ದಾರೆ. ತಾನು ಮಾಡಿದ ಕೃತ್ಯದ ಬಗ್ಗೆ ಜ್ಯೋತಿ ತಪ್ಪೊಪ್ಪಿಕೊಂಡಿದ್ದಾಳೆ. ತನ್ನನ್ನು ಜರಿಯುತ್ತಿರುವುದರಿಂದ ಅವಮಾನಗೊಂಡಿದ್ದ ಜ್ಯೋತಿ ಎಲ್ಲರನ್ನೂ ಕೊಲ್ಲಬೇಕೆಂಬ ಉದ್ದೇಶದಿಂದ ಊಟದಲ್ಲಿ ಕ್ರಿಮಿನಾಶಕ ಬೆರೆಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆಹಾರ ಮಾದರಿಯನ್ನು ಫುಡ್ ಲ್ಯಾಬೋರೇಟರಿಗೆ ಕಳಿಸಿದ ಬಳಿಕ ಊಟದಲ್ಲಿ ಕ್ರಿಮಿನಾಶಕವಿದ್ದ ಬಗ್ಗೆ ಬೆಳಕಿಗೆ ಬಂದಿದೆ.