ಉಡುಪಿ, ಡಿ.30 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಪಾಸ್ಟ್ ಟ್ಯಾಗ್ ಜಿಲ್ಲೆಯಲ್ಲಿ ಕಡ್ಡಾಯ ಮಾಡಬಾರದು ಎಂದು ಉಡುಪಿ ಶಾಸಕ ರಘುಪತಿ ಭಟ್ ಕೇಂದ್ರ ಸರಕಾರದ ಆದೇಶಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಜಿಲ್ಲೆಯಲ್ಲಿ ಸಂಸದರು ಶಾಸಕರು ಜನಪ್ರತಿನಿಧಿಗಳು ಇದ್ದಾರೆ, ಆದರೆ ಯಾರ ಅಭಿಪ್ರಾಯವನ್ನು ತೆಗೆದುಕೊಂಡಿಲ್ಲ. ಪಡುಬಿದ್ರಿ, ಶಾಸ್ತ್ರಿ ಸರ್ಕಲ್ ಕುಂದಾಪುರ ಕಾಮಗಾರಿ ಇನ್ನೂ ಹಾಗೆಯೇ ಇದ್ದು ಅದು ಕೂಡ ಪಂಪ್ ವೆಲ್ ಟ್ರೋಲ್ ರೀತಿಯಲ್ಲಿ ಇಲ್ಲೂ ಆಗಬಾರದು" ಎಂದರು.
ಇನ್ನು "ಈ ಹಿಂದೆ ಪ್ರತಿಭಟನೆ ಸಂದಾನ ಮಾಡಿ ಟೋಲ್ ಗೇಟ್ ನ ಐದು ಕಿ.ಮೀ ಸುತ್ತಲಿನ ವ್ಯಾಪ್ತಿಯಲ್ಲಿ ಬರುವ ಸ್ಥಳೀಯರಿಗೆ ಟೋಲ್ ವಿನಾಯಿತಿ ಸಿಕ್ಕಿತ್ತು. ಜನವರಿ 1 ರಿಂದ ಟೋಲ್ ಸಂಗ್ರಹಕ್ಕೆ ನನ್ನ ತೀವ್ರ ಆಕ್ಷೇಪವಿದೆ. ಜಿಲ್ಲಾಧಿಕಾರಿಯವರು ಯಾವ ದೃಷ್ಟಿಕೋನದಿಂದ ಈ ಕಡ್ಡಾಯ ಆದೇಶ ಹೊರಡಿಸಿದರೋ ಗೊತ್ತಿಲ್ಲ" ಎಂದರು.
ಟೋಲ್ ಗೇಟ್ ಸಂಗ್ರಹ ಮಾಡುವಲ್ಲಿ ಸ್ಥಳೀಯರಿಗೆ ಕೆಲಸಕ್ಕೆ ಅವಕಾಶ ಕೊಡಬೇಕು. ಸಂಪೂರ್ಣ ರಸ್ತೆ ಕಾಮಗಾರಿ ಆಗುವವರೆಗೆ ಟೋಲ್ ಸಂಗ್ರಹವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಜನವರಿ 9ರಂದು ನಡೆಯುವ ದಿಶಾ ಸಭೆಯಲ್ಲಿ ಸಂಸದರೊಂದಿಗೆ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಭಟ್ ತಿಳಿಸಿದ್ದಾರೆ.