ಕಾರ್ಕಳ, ಡಿ.30 (DaijiworldNews/PY): ಯುವ ಕಾಂಗ್ರೆಸ್ ಮುಖಂಡ ದೀಪಕ್ ಕೋಟ್ಯಾನ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಇನ್ನಾ ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ನ ಮಾನ ಉಳಿಸಿದ್ದಾರೆ.

27 ಗ್ರಾಮ ಪಂಚಾಯತ್ ಗಳ ಪೈಕಿ 25 ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಸ್ವಷ್ಟ ಬಹುಮತ ಲಭಿಸಿದೆ. ಈದು ಗ್ರಾಮ ಪಂಚಾಯತ್ ಫಲಿತಾಂಶ ಅಂತಿಮ ಹಂತದಲ್ಲಿ ಇದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮುನ್ನೆಡೆಯುತ್ತಿದ್ದಾರೆ.
ಇನ್ನಾ ಗ್ರಾಮ ಪಂಚಾಯತ್ನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 7 ಸ್ಥಾನಗಳಲ್ಲಿ ಕಾಂಗ್ರೆಸ್ ಉಳಿದ 2 ಸ್ಥಾನಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಇನ್ನಾ ಗ್ರಾಮ ಪಂಚಾಯತ್ 1ನೇ ವಾರ್ಡ್ನಲ್ಲಿ ಒಟ್ಟು 960 ಮತಗಳಿದ್ದು, 23 ಅನರ್ಹಗೊಂಡಿದ್ದು ದೀಪಕ್ ಕೋಟ್ಯಾನ್ 702 ಮತಗಳನ್ನುಗಳಿಸಿರುವುದು ಗಮನಾರ್ಹವಾಗಿದೆ.
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಯಕರ ನಿರ್ಲಕ್ಷ್ಯದಿಂದಾಗಿ ಕಾರ್ಕಳದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕಳೆದ ವಿಧಾನ ಸಭಾ ಕ್ಷೇತ್ರದಲ್ಲಿ ಇದೇ ಪರಿಸ್ಥಿತಿ ಕಾಂಗ್ರೆಸ್ಗೆ ಎದುರಾಗಿತ್ತು. ಆ ನಂತರದಲ್ಲಿ ಮಾಜಿಶಾಸಕ ಹೆಚ್.ಗೋಪಾಲ ಭಂಡಾರಿ ಅವರು ಅಕಾಲಿಕ ನಿಧನದಿಂದಾಗಿ ಪಕ್ಷ ಬೆಳವಣಿಗೆಗೆ ಆರ್ಹ ನಾಯಕರು ಇಲ್ಲದೇ ಇರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಈ ನಡುವೆ ಹಲವು ಯುವ ಕಾಂಗ್ರೆಸ್ ನಾಯಕರು ಬಿಜೆಪಿಗೆ ವಲಸೆಹೋಗಿದ್ದರು.
ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೇಮ ಶೆಟ್ಟಿ 1 ಮತ ಅಂತರದಲ್ಲಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 340 ಮತಗಳಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರಳ ಶೆಟ್ಟಿ 339 ಮತಗಳಿಸಿದ್ದರು.
ನಲ್ಲೂರು ಪೇರಲ್ಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಹರೀಶ್ ಪೂಜಾರಿ 3 ಮತಗಳ ಅಂತರದಲ್ಲಿ ಜಯಭೇರಿ ಸಾಧಿಸಿದ್ದಾರೆ. ಹರೀಶ್ ಪೂಜಾರಿ ಏಕಾಂಗಿಯಾಗಿ ಚುನಾವಣೆ ಪ್ರಚಾರ ನಡೆಸಿ 248 ಮತಗಳನ್ನು ಗಳಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೋಪಾಲ ಪೂಜಾರಿ 245 ಮತಗಳನ್ನು ಗಳಿಸಿದ್ದಾರೆ.
ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 12 ವಾರ್ಡ್ನಲ್ಲಿ ವೇದಾವತಿ ಹಾಗೂ ಶಶಿ ಎಂಬವರು ತಲಾ 312 ಮತಗಳನ್ನು ಪಡೆದು ಸಮಬಲ ಬಂದಾಗ ಲಕ್ಕಿ ಡ್ರಾ ನಡೆಸಿದ್ದು, ಲಕ್ಕಿಡ್ರಾದಲ್ಲಿ ವೇದಾವತಿ ವರು ಜಯಶಾಲಿಯಾಗಿದ್ದಾರೆ.