ಜೂ, 24 : ಕಾಂಗ್ರೆಸ್ ಸೇರಿದ ನಂತರ ಜಮೀರ್ ಅಹ್ಮದ್ ಅವರು ಹುಚ್ಚರಂತೆ ವರ್ತಿಸುತ್ತಿದ್ದು, ಹೀಗಾಗಿ ಅನೈತಿಕ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಅವರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ. ಹಜ್ ಭವನಕ್ಕೆ ಟಿಪ್ಪು ಹೆಸರಿತ್ಟು ಮುಸ್ಲಿಂ ತುಷ್ಟಿಕರಣದ ಮೂಲಕ ಓಟ್ ಬ್ಯಾಂಕ್ ರಾಜಕಾರಣದ ವ್ಯವಸ್ಥೆ ಇದಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಇದೇ ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಬದಲು ಅಬ್ದುಲ್ ಕಲಾಂ ಹೆಸರಿಡುವಂತೆ ಸಂಸದ ಪ್ರಹ್ಲಾದ ಜೋಶಿ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಟಿಪ್ಪು ವಿಚಾರದಲ್ಲಿ ಅನೇಕ ಕಹಿ ಘಟನೆ ನಡೆದಿದ್ದರೂ ಈಗ ಜೆಡಿಎಸ್- ಕಾಂಗ್ರೆಸ್ ಸರ್ಕಾರ ಮತ್ತೇ ಆದೇ ದಾರಿಯಲ್ಲಿ ಸಾಗುವಂತೆ ಪ್ರಚೋದನೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಧಾರವಾಡದಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಅವರು ,''ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟು ಗಲಭೆಯನ್ನು ಸೃಷ್ಟಿಸುವ ಬದಲು ಅಬ್ದುಲ್ ಕಲಾಂ ಭವನ ಎಂದು ಹೆಸರಿಸಬಹುದು . ಕಲಾಂ ಅವರು ದೇಶಕ್ಕಾಗಿ ದುಡಿದಿದ್ದಾರೆ, ಸೇವೆ ಸಲ್ಲಿಸಿದ್ದಾರೆ. ಇಂದಿನ ಯುವ ಪೀಳಿಗೆಯಲ್ಲಿ ಕಲಾಂ ಅವರ ಬಗ್ಗೆ ಗೌರವ, ಶ್ರದ್ಧೆ ಇದೆ. ಆದರೆ ಟಿಪ್ಪು ಒಬ್ಬ ಮತಾಂಧ ಎಂದು ಆಕ್ಷೇಪ ವ್ಯಕ್ತಪಡಿಸಿದರು.