ಮಂಗಳೂರು, ಡಿ.31 (DaijiworldNews/PY): ದ.ಕ ಜಿಲ್ಲೆಯಲ್ಲಿ ಅನಧಿಕೃತ ವ್ಯಕ್ತಿಗಳಿಂದ ಲ್ಯಾಟರೈಟ್ ಕಲ್ಲು ಗಣಿಗಾರಿಕೆ ಅಬಾಧಿತವಾಗಿ ಮುಂದುವರೆದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದರೂ ಕೂಡಾ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ.

ಜಿಲ್ಲಾಡಳಿತದ ಪ್ರಕಾರ, ದ.ಕ ಜಿಲ್ಲೆಯಲ್ಲಿ ಲ್ಯಾಟರೈಟ್ ಕಲ್ಲು ಗಣಿಗಾರಿಕೆ ನಡೆಸಲು ಕೆಲವು ಮಂದಿ ಪರವಾನಗಿ ಹೊಂದಿದ್ದಾರೆ. ಆದರೆ, ಉಳಿದ 500 ಮಂದಿ ಗಣಿಗಾರಿಕೆಯನ್ನು ಅಕ್ರಮವಾಗಿ ಮಾಡುತ್ತಿದ್ದಾರೆ. ಇದರೊಂದಿಗೆ ಅಕ್ರಮ ಮರಳು ಸಾಗಾಟ ಕೂಡಾ ಜಿಲ್ಲೆಯ ಹಿತಾಸಕ್ತಿಗೆ ಧಕ್ಕೆಯುಂಟು ಮಾಡುತ್ತಿದೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಬಂಬಿಲಪದವಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಭೂಮಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಲ್ಯಾಟರೈಟ್ ಕಲ್ಲು ಗಣೆಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ.
ಅಕ್ರಮ ಲ್ಯಾಟರೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಗಮನಿಸಿದ ನಂತರ, ಗ್ರಾಮ ಮಟ್ಟದ ಅಧಿಕಾರಿಗಳಿಗೆ ಅವರ ಪರವಾನಗಿಗಳನ್ನು ಪರಿಶೀಲಿಸಲು ಮತ್ತು ಅಕ್ರಮವನ್ನು ನಿಲ್ಲಿಸುವ ಅಧಿಕಾರವನ್ನು ನೀಡಲಾಗಿದೆ. ಇದಕ್ಕೆ ಗ್ರಾಮ ಅಕೌಂಟೆಂಟ್ಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇರ ಹೊಣೆಗಾರರಾಗಿದ್ದು, ಹೆಚ್ಚಿನ ಅಕ್ರಮಗಳು ಈಗ ಸ್ಥಗಿತಗೊಂಡಿವೆ ಎಂದು ಹೇಳಿದ್ದರು. ಪ್ರಸ್ತುತ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಜನವರಿ ಮೊದಲ ವಾರದಿಂದ ಮತ್ತೆ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಹೇಳಿದರು.
ಅಮ್ಟಾಡಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕೆಲವು ಜನ ಪ್ರತಿನಿಧಿಗಳು ಬೆಂಬಲಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಆದರೆ, ಈ ವಿಚಾರವಾಗಿ ಗ್ರಾಮಸ್ಥರು ನೀಡಿದ ದೂರುಗಳಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಜಿಲ್ಲಾಡಳಿತವನ್ನು ಕೇಳಿದ್ದರು. ನಂತರ ಅಮ್ಟಾಡಿ ಬಂಬಿಲಪದವು ಗಣಿಗಾರಿಕೆ ಸುಮಾರು ಎರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ನಿಂತು ಹೋಗಿತ್ತು ಎಂದು ಹೇಳಲಾಗಿದೆ.
ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ತಹಶೀಲ್ದಾರ್ ರಶ್ಮಿ ಅವರನ್ನು ಗ್ರಾಮಸ್ಥರು ಒತ್ತಾಯಿಸಿದ ನಂತರ ಬಂಬಿಲಪದವಿನಲ್ಲಿ ಲ್ಯಾಟರೈಟ್ ಗಣಿಕಾರಿಕೆ ಈಗ ತಾತ್ಕಾಲಿಕವಾಗಿ ನಿಂತುಹೋಗಿದೆ. ಆದರೆ, ಯಾವುದೇ ಸಮಯದಲ್ಲಿ ಮತ್ತೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.