ಮಂಗಳೂರು, ಜೂ 24 : ದಕ್ಷಿಣ ಭಾರತದಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಮಂಗಳೂರು ಅತ್ಯುತ್ತಮ ನಗರವೆಂಬ ಕೀರ್ತಿಗೆ ಪಾತ್ರವಾಗಿದ್ದು, ಕೇಂದ್ರ ಸರ್ಕಾರದಿಂದ ನೀಡುವ ಪ್ರಶಸ್ತಿಯನ್ನು ಗಳಿಸಿದೆ. ಭಾರತ ಸರ್ಕಾರದ ಕೇಂದ್ರ ನಗರಾಭಿವೃದ್ದಿ ಮತ್ತು ವಸತಿ ಸಚಿವಾಲಯ ವತಿಯಿಂದ ಸ್ವಚ್ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛತೆ ಕುರಿತು ಕೇಂದ್ರ ನಗರಾಭಿವೃದ್ದಿ ಸಚಿವ ಹರಿದೀಪ್ಸಿಂಗ್ ಪುರಿ, ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಮಯಾಸಿಂಗ್ , ಸ್ವಚ್ಚ ಭಾರತ ಮಿಷನ್ನ ಕಾರ್ಯದರ್ಶಿ ವಿನೋದ್ ಕುಮಾರ್ ಜಿಂದಾಳ್ ಹಾಗೂ ಕೇಂದ್ರ ವಸತಿ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರ ಅವರು ಮಂಗಳೂರು ನಗರಪಾಲಿಕೆ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮಧ್ಯಪ್ರದೇಶದ ಇಂದೂರ್ ಬ್ರಿಲಿಯಲ್ಸ್ ಕನ್ವೆನ್ಸನಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮೇಯರ್ ಬಾಸ್ಕರ್ ಕೆ. ಮೊಯ್ಲಿ ,ಪಾಲಿಕೆ ಆಯುಕ್ತ ಮೊಹಮದ್ ನಜೀರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಆರ್.ಡಿಸೋಜಾ ಮತ್ತು ಪರಿಸರ ಅಭಿಯಂತರ ಮಧು ಎಸ್ ಮನೋಹರ್ ಪ್ರಶಸ್ತಿ ಸ್ವಿಕರಿಸಿದರು.
ಆಯ್ಕೆ ಪ್ರಕ್ರಿಯೆ ಹೀಗೆ ನಡೆದಿತ್ತು :
ಈ ಸಮೀಕ್ಷೆಯಲ್ಲಿ ನಗರಗಳ ಸ್ವಚ್ಚತೆ, ನಾಗರಿಕರ ಅಭಿಪ್ರಾಯ, ನವೀನ ಪದ್ದತಿಗಳ ಅನುಷ್ಠಾನ, ಹಾಗೂ ಘನ ತ್ಯಾಜ್ಯ ವಸ್ತುಗಳ ಉತ್ತಮ ನಿರ್ವಹಣೆ ಬಗ್ಗೆ ಅಂಶಗಳನ್ನು ಪರಿಗಣಿಸಿ ದಾಖಲೆಗಳ ಪರಿಶೀಲನೆಯೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿತ್ತು. ಇದಕ್ಕೆ ಅಂಕಗಳನ್ನು ನೀಡಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ 52 ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿವಿಧ ವರ್ಗವಾರು ಸ್ವಚ್ಛತೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅದರಲ್ಲಿ ಮಂಗಳೂರು ನಗರವನ್ನು ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಅತ್ಯುತ್ತಮ ನಗರವನ್ನಾಗಿ ಆಯ್ಕೆ ಮಾಡಿ ಘೋಷಿಸಲ್ಪಟ್ಟಿದೆ.