ಮಂಗಳೂರು, ಜೂ 24 : ಶತಕದತ್ತ ದಾಪುಗಾಲು ಇಡುತ್ತಿರುವ ಕೋಸ್ಟಲ್ ವುಡ್ ಇಂಡಸ್ಟ್ರಿ ಗಿನ್ನಿಸ್ ದಾಖಲೆಯ ಸಾಹಸಕ್ಕೆ ಕೈ ಹಾಕಿದೆ. ಕೇವಲ 17 ಗಂಟೆಗಳಲ್ಲಿ ಒಂದು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸುವ ಮೂಲಕ ಗಿನ್ನಿಸ್ ದಾಖಲೆ ಬರೆಯುವ ಸಿದ್ದತೆಯಲ್ಲಿದೆ. 10 ಮಂದಿ ನಿರ್ದೇಶಕ ಹಾಗೂ ಹತ್ತು ಮಂದಿ ನಟರ ಮುಖೇನ ಚಿತ್ರವೊಂದನ್ನು ತಯಾರಿಸಲು ತುಳು ಚಿತ್ರರಂಗ ಸಿದ್ದತೆ ಮಾಡಿಕೊಂಡಿದೆ.
ಆಗಸ್ಟ್ ಅಥವಾ ಸಪ್ಟೆಂಬರ್ ನಲ್ಲಿ ಕಲಾವಿದರು ನಿರ್ದೇಶಕರ ಲಭ್ಯತೆಯನ್ನು ಪರಿಗಣಿಸಿ ದಿನಾಂಕ ನಿಗದಿಪಡಿಸಿ ಸಿನಿಮಾ ಶೂಟಿಂಗ್ ನಡೆಯಲಿದೆ. ಚಿತ್ರದ ಟೈಟಲ್ ಇನ್ನಷ್ಟೆ ಫೈನಲ್ ಆಗಬೇಕಿದ್ದು, ನಾಯಕಿಯರೂ ಸಂಖ್ಯೆಯೂ ನಿಗದಿಯಾಗಿಲ್ಲ. ಈ ಸಿನಿಮಾದಲ್ಲಿ ತುಳು ಚಿತ್ರರಂಗದ ಧಿಗ್ಗಜರು ಸಹಕಲಾವಿದರ ಜತೆಗೆ ತಮಿಳಿನ ಖ್ಯಾತ ಖಳನಾಯಕ ರಾಜಸಿಂಹ ಅವರೂ ಕೂಡಾ ಅಭಿನಯಿಸಲಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾ. 23 ರ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ತುಳು ನಟ ಸೌರವ್ ಭಂಡಾರಿ ಮಾತನಾಡಿ ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯಿಂದ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ನೇತೃತ್ವದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು ತುಳುವಿನ ಪ್ರಥಮ ಮಲ್ಟಿಸ್ಟಾರ್ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಲಿದೆ.
ಈ ಚಿತ್ರದ ಶೂಟಿಂಗ್ ಗಾಗಿ 10 ಕ್ಕೂ ಅಧಿಕ ಕ್ಯಾಮೆರಾಗಳು ಬಳಕೆಯಾಗಲಿದ್ದು ಏಕಕಾಲದಲ್ಲಿ 10 ಸ್ಥಳದಲ್ಲಿ ಚಿತ್ರೀಕರಣ ನಡೆಯಲಿದೆ. 17 ಗಂಟೆಗಳಲ್ಲಿ ಚಿತ್ರೀಕರಣ ಪೂರ್ಣವಾಗಲಿದ್ದು ಸಿನಿಮಾದ ಬಜೆಟ್ ಇನ್ನು ನಿಗದಿಯಾಗಿಲ್ಲ ಎಂದರು.
ಚಿತ್ರದ ಕಥೆ ಸಂಭಾಷಣೆ ಮತ್ತು ಸಂಕಲನ ಹರೀಶ್ ಕೊಟ್ಪಾಡಿ ಅವರದಾಗಿದ್ದು, ನಿರ್ದೇಶಕ ದೇವದಾಸ ಕಾಪಿಕಾಡ್ , ವಿಜಯ್ ಕುಮಾರ್ ಕೊಡಿಯಾಲ್ ಬೈಲ್ , ಪ್ರಕಾಶ್ ಪಾಂಡೇಶ್ವರ, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್ ಕಮಲ್, ರಿತೇಶ್ ಬಂಗೇರಾ, ರಘು ಶೆಟ್ಟಿ ಚಿತ್ರ ನಿರ್ದೇಶಿಸಲಿದ್ದಾರೆ.
ನಾಯಕರಾಗಿ, ಅರ್ಜುನ್ ಕಾಪಿಕಾಡ್ , ಸೌರಭ್ ಬಂಡಾರಿ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ಅಸ್ತಿಕ್ ಶೆಟ್ಟಿ ನಾಯಕ ನಟರಾಗಿ ಮಿಂಚಲಿದ್ದಾರೆ. ಉಳಿದವರಿಗಾಗಿ ಮತುಕತೆ ಮುಂದುವರಿದಿದೆ ಎಂದು ವಿವರಿಸಿದರು. ನಟಿಯಾಗಿ ಸಧ್ಯಕ್ಕೆ ಪೂಜಾ ಶೆಟ್ಟಿಯವರ ಆಯ್ಕೆ ನಡೆದಿದೆ, ಚಿತ್ರದ ಪಾತ್ರಕ್ಕನುಗುಣವಾಗಿ ಮತ್ತಷ್ಟು ನಾಯಕಿಯ ಆಯ್ಕೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಪಾಂಡೇಶ್ವರ, ರಾಜೇಶ್ ಬ್ರಹ್ಮಾವರ್ , ಅವಿನಾಶ್, ಪಮ್ಮಿ ಕೊಡಿಯಾಲ್ ಬೈಲ್ ಮಯೂರ್ ಶೆಟ್ಟಿ ರಂಜಿತ್ ಸುವರ್ಣ, ರಾಜ್ ಕಮಲ್ ರಿತೇಶ್ ಬಂಗೇರ, ರಘು ಶೆಟ್ಟಿ, ಅರ್ಜುನ್ ಕಾಪಿಕಾಡ್, ಅಸ್ತಿಕ್ ಶೆಟ್ಟಿ, ಚೇತನ್ ರೈ , ಪೂಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.