ಬೆಂಗಳೂರು, ಜೂ 24: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ಪರಶುರಾಮ್ ವಾಗ್ಮೋರೆಯನ್ನು ಭೇಟಿಯಾಗಲು ಆತನ ಹೆತ್ತವರು ಬೆಂಗಳೂರಿಗೆ ಬಂದಿದ್ದು , ಎಸ್ಐಟಿ ಅಧಿಕಾರಿಗಳು ಪರಶುರಾಮ್ನನ್ನು ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಿಜಯಪುರದ ಸಿಂದಗಿಯಿಂದ ಮಗನನ್ನು ನೋಡಲೆಂದು ತಂದೆ ಅಶೋಕ್ ವಾಗ್ಮೋರೆ ಮತ್ತು ತಾಯಿ ಜಾನಕಿಬಾಯಿ ಬೆಂಗಳೂರಿನ ಸಿಐಡಿ ಕಚೇರಿಗೆ ಬಂದಿದ್ದು, ಭೇಟಿಗಾಗಿ ಸಿಐಡಿ ಕಚೇರಿಯ ಆವರಣದಲ್ಲಿ ಕಾದುಕುಳಿತಿದ್ದರು.ಆದ್ರೆ ವಾಗ್ಮೋರೆ ಎಸ್ಐಟಿ ಅಧಿಕಾರಿಗಳ ವಶದಲ್ಲಿದ್ದು, ಪೋಷಕರಿಗೆ ಮಗನನ್ನು ಅವಕಾಶ ಮಾಡಿಕೊಟ್ಟಿದ್ದು, ಮಗನನ್ನು ನೋಡಿದ ಜಾನಕಿಬಾಯಿ ಗದ್ಗದಿತರಾಗಿ ಅತ್ತುಬಿಟ್ಟಿದ್ದಾರೆ.
ಒಂದಿಷ್ಟು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಪುತ್ರನನ್ನು ನೋಡಿ ಹೋಗಿದ್ದರು. ಆದರೆ ಮತ್ತೆ 14 ದಿನಗಳಿಂದ ಮಗನನ್ನು ನೋಡಲೇಬೇಕು ಎಂದು ತಾಯಿ ಜಾನಕಿ ಹಠ ಮಾಡುತ್ತಾ ಹಾಸಿಗೆ ಹಿಡಿದಿದ್ದರು. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು ಎನ್ನಲಾಗಿದೆ. ಇತ್ತ ಪರಶುರಾಮ್ ಕೂಡ ತಾಯಿಯನ್ನು ಕಂಡು ಮಾತನಾಡಿಸುವ ಹಂಬಲ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಹೆತ್ತವರು ಬೆಂಗಳೂರಿಗೆ ಬಂದಿದ್ದರು.