ಕುಂದಾಪುರ, ಜ.01 (DaijiworldNews/PY): ಇಲ್ಲಿನ ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ 17 ವರ್ಷದ ಬಾಲಕಿಯ ವಿವಾಹ ನಡೆಸಲು ಮುಂದಾದ ಸಂದರ್ಭ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದ ಘಟನೆ ಗುರುವಾರ ನಡೆದಿದೆ.




ಕುಂದಾಪುರ ತಾಲೂಕಿನ ತಲ್ಲೂರು ಗುಡ್ಡೆಯಂಗಡಿ ಗ್ರಾಮದ 17 ವರ್ಷದ ಬಾಲಕಿಯನ್ನು 28 ವರ್ಷದ ಹುಡುಗನೊಂದಿಗೆ ವಿವಾಹ ಮಾಡಲು ಎರಡೂ ಕಡೆಯ ಸಂಬಂಧಿಕರೂ ಕೂಡಾ ಒಪ್ಪಿದ್ದರು. ವಿವಾಹ ಸಮಾರಂಭಕ್ಕೆ 200ಕ್ಕೂ ಅಧಿಕ ಮಂದಿ ಸೇರಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಉಡುಪಿ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇತರ ಇಲಾಖೆಯ ಅಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿ ಬಾಲ್ಯವಿವಾಹವನ್ನು ತಡೆದಿದ್ದಾರೆ.
ಅಧಿಕಾರಿಗಳು ಎರಡೂ ಕುಟುಂಬದವರಿಗೂ ಕೂಡಾ ಬಾಲ್ಯವಿವಾಹ ನಿಷೇಧ ಹಾಗೂ ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಕುಟುಂಬದವರು, ಹಾಲ್ ಮಾಲೀಕರು ಹಾಗೂ ಪುರೋಹಿತರಿಂದ ಮುಚ್ಚಳಿಕೆ ಬರೆಸಿಕೊಂಡರು. ಸಭಾಂಗಣದಲ್ಲಿ ನೆರೆದಿದ್ದ ಜನರನ್ನು ವಾಪಾಸ್ಸು ಕಳುಹಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಸಹಾಯಕ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಶೋಭಾ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.