ಬಂಟ್ವಾಳ, ಜೂ 24: ಕಟ್ಟಡದ ಪಳೆಯುಳಿಕೆಯಂತಿರುವ ಗೋಡೆಯೊಂದು ಉಳಿದುಕೊಂಡಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದು ಬಿ.ಸಿ.ರೋಡಿನ ಹೃದಯಭಾಗದಲ್ಲಿದ್ದು ಕಟ್ಟಡದ ಮುಖ್ಯಬಾಗಿಲಿನ ಈ ಗೋಡೆ ಬಂಟ್ವಾಳ ತಾಪಂ ನ ಹಳೇ ಕಟ್ಟಡದ ಮುಂಭಾಗದ್ದಾಗಿದೆ. ಪಿಪಿಪಿ ಮಾದರಿಯಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಇಲ್ಲಿದ್ದ ಹಳೇ ತಾಪಂ ಕಟ್ಟಡ ,ಮಹಾತ್ಮ ಗಾಂಧಿ ಜನ್ಮಶತಮಾನೋತ್ಸವ ಸಭಾಭವನವನ್ನು ಕೆಡವಲಾಗಿತ್ತು. ಕಟ್ಟಡವನ್ನು ಪೂರ್ತಿ ಕೆಡವಿದ ಬಳಿಕ ಕಟ್ಟಡದ ಮುಂಭಾಗಿಲಿನ ಪಾರ್ಶ್ವವನ್ನು ಹಾಗೆ ಉಳಿಸಲಾಗಿದೆ ,ಅದರಲ್ಲಿನ ಶಟರ್ ನ ಬಾಗಿಲನ್ನು ಕಿತ್ತು ತೆಗೆಯಲಾಗಿದ್ದು, ಗೋಡೆಯನ್ನು ಹಾಗೆ ಉಳಿಸಲಾಗಿದ್ದು, ಈ ಭಾಗ ಟೊಳ್ಳಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕಟ್ಟಡವನ್ನು ಕೆಡವಲಾಗಿದ್ದು, ವಿಧಾನಸಭಾ ಚುನಾವಣೆಗೆ ಘೋಷಣೆಯ ವಾರದ ಮೊದಲು ಖಾಸಗಿ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಟ್ಟಡದ ತೆರವಿಗೆ ಕಾನೂನಾತ್ಮಕ ಅಡ್ಡಿಯನ್ನು ನಿವಾರಿಸಿದ ಬಳಿಕ ಕಟ್ಟಡವನ್ನು ತೆರವುಗೊಳಿಸಲಾಗಿತ್ತು.ಇದರ ತೆರವಿಗೆ ತಾಪಂ ಟೆಂಡರ್ ಕರೆದು ಗುತ್ತಿಗೆಯನ್ನು ನೀಡಿತ್ತು.ವಿಧಾನ ಸಭಾ ಚುನಾವಣೆ ಘೋಷಣೆಯಾಗುತ್ತದೆಯೆಂಬ ಭಯದಿಂದ ಕಟ್ಟಡವನ್ನು ತಾಪಂಆಡಳಿತತರಾತುರಿಯಲ್ಲಿತೆರವುಗೊಳಿಸಿತ್ತು. ಕಟ್ಟಡವನ್ನು ಪೂರ್ತಿಕೆಡವಲಾಯಿತಾದರೂ,ಅದರ ಮುಂಬಾಗಿಲಿನ ಅವಶೇಷ ಮಾತ್ರ ಹಾಗೆ ಉಳಿಸಿಕೊಂಡಿದ್ದರಿಂದ ಅಪಾಯವನ್ನು ಆಹ್ವಾನಿಸುತ್ತಿದೆ.
ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಟ್ಟಡದ ಮುಂಬಾಗಿಲಿನ ಉಳಿಕೆಯ ಅಡಿಭಾಗದ ಮಣ್ಣು ಮಳೆ ನೀರಿಗೆ ಕೊಚ್ಚಿಹೋಗುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.ಈ ಉಳಿಕೆ ಪಾರ್ಶ್ವದ ಮುಂಭಾಗದಲ್ಲಿ ಸರ್ವಿಸ್ ರಸ್ತೆಯಿದ್ದು,ಇಡೀ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ನಡೆದಾಡುತ್ತಿದ್ದರೆ, ವಾಹನಗಳು ನಿರಾಂತಕವಾಗಿ ಸಂಚರಿಸುತ್ತಲೇ ಇರುತ್ತವೆ.ಹಾಗಯೇ ಇದರ ಪಕ್ಕದಲ್ಲಿ ಇದೀಗ ವಾಹನಗಳು ನಿಲುಗಡೆಯಾಗುವುದಲ್ಲದೆ,ಜನರು ಕೂಡ ಬಸ್ ಗಾಗಿ ಇಲ್ಲೇ ಕಾದು ನಿಲ್ಲತ್ತಾರೆ. ಜೊತೆಗೆ ಇದರ ಮುಂದೆಯೇ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಯು ಇದ್ದು, ಈ ಗೋಡೆ ಕುಸಿದುಬಿದ್ದರೆ ಸಾಕಷ್ಟು ಹಾನಿಯಾಗುವ ಸಂಭವವಿದೆ. ವಿಶೇಷವಾಗಿ ಈ ಗೋಡೆಯ ಪಕ್ಕ ಮರದ ರೆಂಬೆಯೊಂದು ಬೆಳೆದಿದ್ದು, ಕಬ್ಬಿಣದ ವಿದ್ಯುತ್ ಕಂಬವೊಂದು ಇದೆ. ಇಷ್ಟು ಭಾಗವನ್ನು ಯಾಕೆ ಉಳಿಸಿಕೊಳ್ಳಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬಂಟ್ವಾಳ ತಾಪಂ ಆಡಳಿತ ಈ ಬಗ್ಗೆ ಗಮನಹರಿಸಿ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಲು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.