ಮಂಗಳೂರು,ಜ.01 (DaijiworldNews/HR): ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಮೀನಿನಲ್ಲಿ'ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸದಸ್ಯರು ಜನವರಿ 1ರಂದು ಮೌನ ಪ್ರತಿಭಟನೆ ನಡೆಸಿದ್ದಾರೆ.



ಈ ಕುರಿತು ಸುದ್ದಿಗಾರರೊಂದಿಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ , “ಒಂಬತ್ತು ವರ್ಷಗಳ ಹಿಂದೆ ಭವನಕ್ಕೆ ಅಡಿಪಾಯ ಹಾಕಲಾಗಿದ್ದರೂ, ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿಲ್ಲ.ಉಳ್ಳಾಲ ಒಂದು ಸೂಕ್ಷ್ಮ ಪ್ರದೇಶವಾಗಿದ್ದು, ಒಂದೇ ಸ್ಥಳದಲ್ಲಿ ಬರುವ ಎರಡು 'ಭವನಗಳು' ಸಾಕಷ್ಟು ಗೊಂದಲಗಳಿಗೆ ದಾರಿ ಮಾಡಿಕೊಡುತ್ತವೆ. ಈ ಭೂಮಿಯಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ ಬಹಳ ಅವಶ್ಯಕವಾಗಿದೆ. ಜಿಲ್ಲಾಡಳಿತ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಬೇಕು. ಬ್ಯಾರಿ ಭವನ ನಿರ್ಮಾಣವನ್ನು ನಾವು ವಿರೋಧಿಸುತ್ತಿಲ್ಲ, ಆದರೆ ಬ್ಯಾರಿ ಭವನವನ್ನು ಬೇರೆ ಯಾವುದಾದರೂ ಸ್ಥಳದಲ್ಲಿ ನಿರ್ಮಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ "ಎಂದರು.
ಈ ನಿಟ್ಟಿನಲ್ಲಿ ನಿರ್ಮಾಣಕ್ಕಾಗಿ ಕರ್ನಾಟಕ ವಸತಿ ಮಂಡಳಿಯೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ರಾಣಿ ಅಬ್ಬಕ್ಕ ಭವನದ ಕಾಮಗಾರಿ ನಿರ್ಮಾಣವನ್ನು ಒಂದು ವರ್ಷದೊಳಗೆ ಜಿಲ್ಲಾಡಳಿತ ಪೂರ್ಣಗೊಳಿಸಬೇಕು ಎಂದರು.
ಇನ್ನು ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ, " ರಾಣಿ ಅಬ್ಬಕ್ಕ ಭವನ ಅಗತ್ಯವನ್ನು ಒತ್ತಿ ಹೇಳಿದ್ದಾರೆ".
ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜೇಶ್ ಪೂಜಾರಿ ಮಾತನಾಡಿ, "ನಾವು ರಾಣಿ ಅಬ್ಬಕ್ಕ ಭವನದ ಪಕ್ಕದಲ್ಲಿ ಬ್ಯಾರಿ ಭವನವನ್ನು ನಿರ್ಮಿಸಬಾರದು ಎಂದು ಒತ್ತಾಯಿಸಿ ನಾವು ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ" ಎಂದರು.
ಸದಾನಂದ ಬಂಗೇರಾ, ಪವಿತ್ರ ಗಟ್ಟಿ, ಶಶಿಕಲಾ ಗಟ್ಟಿ, ರತ್ನಾವತಿ ಬೈಕಾಡಿ, ಆನಂದ್ ಕೆ ಅಸೈಗೋಳಿ, ಮಾಧವಿ ಉಳ್ಳಾಲ, ಮಲ್ಲಿಕಾ ಭಂಡಾರಿ, ಲತಾ ಶ್ರೀಧರ್, ಶಶಿಕಾಂತಿ ಉಳ್ಳಾಲ, ಸೀತಾರಾಮ್ ಬಂಗೇರಾ, ಸತೀಶ್ ಭಂಡಾರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.