ಮಂಗಳೂರು, ಜ.01 (DaijiworldNews/PY): "ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ" ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸ್ಮಾರ್ಟ್ ಸಿಟಿ ಕಾಮಗಾರಿಗಳು ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಯಾವುದೇ ಮಾಹಿತಿ ಇಲ್ಲದೆ ನಗರದ ರಸ್ತೆಗಳನ್ನು ಕಾಂಕ್ರಿಟಿಕರಣಕ್ಕಾಗಿ ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ" ಎಂದು ಆರೋಪಿಸಿದರು.
"ಮಹಾನಗರ ಪಾಲಿಕೆಯ ರಥಬೀದಿಯ ಬಳಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಎರಡು ತಿಂಗಳೊಳಗೆ ಬಿರುಕು ಬಿಟ್ಟಿದೆ. ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಲ್ಲ" ಎಂದು ಕಾಣುತ್ತಿದೆ ಎಂದರು.
"ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪುರಭವನದ ಬಳಿಯ ನೆಹರು ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು 1.5 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ, ಮೈದಾನವನ್ನು ಫುಟ್ಬಾಲ್ ಮೈದಾನವಾಗಿ ಉಳಿಸಿಕೊಳ್ಳಬೇಕು ಎಂದು ರಾಜ್ಯ ಹೈಕೋರ್ಟ್ ನಿದೇರ್ಶನ ನೀಡಿದೆ. ಈ ಹಿನ್ನೆಲೆ 1.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾರ್ಯ ಸಂಪೂರ್ಣ ವ್ಯರ್ಥವಾಗಿದೆ" ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸ್ ಲೋಟ್ ಪಿಂಟೋ, ನವೀನ್ ಡಿಸೋಜಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.