ಚಾಮರಾಜನಗರ, ಜೂ 25 : ಪ್ರಾಥಮಿಕ ಹಂತದಲ್ಲಿ ಪುಸ್ತಕ ಮುಚ್ಚಿಟ್ಟು ಪರೀಕ್ಷೆ ಬರೆಯುವ ಅವೈಜ್ಞಾನಿಕ ಪದ್ದತಿಯ ಬದಲಾಗಿ, ಒಂದರಿಂದ 5 ನೇ ತರಗತಿಯವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ (ಓಪನ್ ಬುಕ್ ಎಕ್ಸಾಂ)ನೂತನ ಶಿಕ್ಷಣ ಪದ್ಧತಿ ತರಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಚಾಮರಾಜನಗರದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಅಂಗವಾಗಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಸೀಮಿತ ವರ್ಗಕ್ಕೆ ಮಾತ್ರ ಇಂದಿನ ಪರೀಕ್ಷಾ ಪದ್ಧತಿಗಳು ಉಪಯೋಗವಾಗುತ್ತಿದ್ದು, ಪುಸ್ತಕ ಮುಚ್ಚಿಟ್ಟು ಬರೆಯುವ ಪರೀಕ್ಷೆಗಳು ಅವೈಜ್ಞಾನಿಕವಾಗಿವೆ ಎಂದು ಅವರು ಪ್ರತಿಪಾದಿಸಿದರು.
ಮಕ್ಕಳನ್ನು ಅಪರಾಧಿ ಮನೋಭಾವದಿಂದ ನೋಡುವಂತೆ ಈಗಿನ ಅವೈಜ್ಞಾನಿಕ ಪರೀಕ್ಷಾ ಪದ್ದತಿ ಇದ್ದು ಇದರ ಬದಲಾವಣೆ ಅಗತ್ಯ. ಪುಸ್ತಕ ನೋಡಿ ಬರೆಯುವುದು ಮಕ್ಕಳ ಸಂವಹನ ಕೌಶಲ್ಯ ಕ್ಕೆ ಸಹಕಾರಿಯಾಗಿದೆ.ಪುಸ್ತಕ ನೋಡಿಕೊಂಡೇ ಪರೀಕ್ಷೆ ಬರೆಯುವ ಮೂಲಕ ಮಕ್ಕಳಲ್ಲಿ ವಿಶ್ಲೇಷಣಾ ಗುಣ ಮತ್ತು ಕ್ರೀಯಾಶೀಲ ಗುಣ ಬೆಳೆಯುತ್ತದೆ ಎಂದು ಹೇಳಿದರು . ಜೊತೆಗೆ ಶಿಕ್ಷಕರು ತಮ್ಮ ಕುಟುಂಬ, ಸಮಾಜದ ಗೋಜಲುಗಳನ್ನು ಶಾಲಾ ಕಾಂಪೌಂಡ್ನಲ್ಲೇ ಹೊರಗಿಟ್ಟು ನಿರ್ಮಲ ಮನಸ್ಸಿನಿಂದ ಕಲಿಕೆ ನೀಡಬೇಕು. ಪ್ರಜ್ಞೆಯಿಂದ ನೋಡುವುದಾದರೆ ಪರೀಕ್ಷೆ ಬರೆಯಲು ತೆರಲುವ ಮಕ್ಕಳನ್ನು ಕ್ರಿಮಿನಲ್ಗಳಂತೆ ಏಕೆ ನೋಡಬೇಕು ಎಂದು ಅವರು ಪ್ರಶ್ನಿಸಿದರು.