ಮಂಗಳೂರು, ಜೂ 25 : ಧರ್ಮಸ್ಥಳ ಕೆಎಸ್ ಆರ್ ಟಿಸಿ ಡಿಪೋದಲ್ಲಿದ್ದ ಅವ್ಯವಸ್ಥೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದ ಕೆಎಸ್ ಆರ್ ಟಿಸಿ ಚಾಲಕ ರಮೇಶ್ ಎಂಬವರನ್ನು ಅಮಾನತುಗೊಳಿಸಲಾಗಿದೆ. ಡಿಪೋದಲ್ಲಿದ್ದ ಅವ್ಯವಸ್ಥೆಗಳನ್ನು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ರಮೇಶ್ ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಡೀಯೊದಲ್ಲಿ ಏನಿತ್ತು?
ನೌಕರರನ್ನು ಅತಿಯಾಗಿ ದುಡಿಸಿಕೊಳ್ಳುವುದು , ಚಕ್ರಕ್ಕೆ ಬೋಲ್ಟ್ ನಟ್ಟ್ ಗಳನ್ನು ಸರಿಯಾಗಿ ಜೋಡಿಸದಿರುವುದು ಮತ್ತು ಕಡಿಮೆ ಜೋಡಿಸುವುದು, , ಡಿಪೋದಲ್ಲಿ ಕನಿಷ್ಠ ಮೂಲ ಸೌಲಭ್ಯಗಳೇ ಇಲ್ಲದೆ ಸುಸ್ಥಿತಿಯಲ್ಲಿಲ್ಲದ ಬಸ್ ಗಳನ್ನು ನೀಡಿ ಚಲಾಯಿಸಲು ನೀಡುವುದು, ಹೆಚ್ಚು ಕಡಿಮೆಯಾದರೆ ಚಾಲಕನನ್ನು ಹೊಣೆಗಾರರನ್ನಾಗಿಸುವುದು ಹೀಗೆ ಅಲ್ಲಿರುವ ಸಮಸ್ಯೆಗಳನ್ನು ವಿಸ್ತೃತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಚಾಲಕರು ಹಾಗೂ ನಿರ್ವಾಹಕರು ತಂಗಲು ಸೂಕ್ತ ವ್ಯವಸ್ಥೆ ಇಲ್ಲ. ಶೌಚಾಲಯ ಗಬ್ಬು ನಾರುತ್ತಿದೆ. ಚಾಲಕರೇ ಬಸ್ ತೊಳೆಯಬೇಕಿದೆ. ಬಸ್ ಗಳಿಗೆ ರಿಸೋಲ್ಡ್ ಟಯರ್ ಗಳನ್ನು ಬಳಸಲಾಗುತ್ತಿದೆ. ಹಾನಿಯಾದರೆ ಚಾಲಕರು, ನಿರ್ವಾಹಕರು, ತಾಂತ್ರಿಕ ವರ್ಗ ದಂಡ ಕಟ್ಟಬೇಕಾಗುತ್ತದೆ. ಪ್ರಶ್ನಿಸಿದರೆ ವಜಾ ಮಾಡುವ ಬಗ್ಗೆ ಮಾತನಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಕಳೆಯಬೇಕಿದೆ ಎಂದು ವೀಡಿಯೋದಲ್ಲಿ ತಿಳಿಸಿದ್ದರು .
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಇತ್ತೀಚೆಗೆ ರಾಜ್ಯ ಸಾರಿಗೆ ನಿಗಮ ಉನ್ನತ ಅಧಿಕಾರಿಗಳು , ಬೆಂಗಳೂರಿನಿಂದ ಡೆಪ್ಯುಟಿ ಚೀಪ್ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ವಿಭಾಗೀಯ ತಾಂತ್ರಿಕ ಅಭಿಯಂತರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.