ಉಡುಪಿ, ಜ.02 (DaijiworldNews/PY): ಕೇಂದ್ರ ಸರಕಾರವು ರೂಪಿಸಿರುವ ಹೊಸ ಕಾರ್ಮಿಕ ಸಂಹಿತೆಗಳು ರೈತರ ಸಂಬಂಧಪಟ್ಟ ಮೂರು ಕೃಷಿ ವಿರೋಧಿ ಕಾಯ್ದೆ, ವಿದ್ಯುತ್ ಕಾಯ್ದೆ 2020ರ ಗೆಜೆಟ್ ನೋಟಿಫಿಕೇಶನ್ ಪ್ರತಿಗಳನ್ನು ಸಿಐಟಿಯು ಸಂಘಟನೆ ರಾಜ್ಯವ್ಯಾಪಿಯಾಗಿ ಇಂದು ದಹಿಸುವ ಮೂಲಕ ಪ್ರತಿಭಟನೆ ನಡೆಸಿತು.

ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ನಡೆದ ಸಭೆಯ ಆರಂಭಕ್ಕೂ ಮುನ್ನ ಜನರಿಗೆ ಮಾರಕವಾಗಿರುವ ಹೊಸ ಕಾಯ್ದೆಗಳ ಸರಕಾರದ ಗೆಜೆಟ್ ನೋಟಿಫಿಕೇಷನ್ ದಹಿಸಿ ಮಾತನಾಡಿದ ಅವರು, ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸಲು ರೈತ-ಕಾರ್ಮಿಕರ ಹಿತವನ್ನು ಬಲಿಕೊಡಲಾಗುತ್ತಿದೆ. ಈ ನೀತಿಗಳನ್ನು ಸೋಲಿಸಲು 2021 ಹೊಸ ವರ್ಷದಲ್ಲಿ ರೈತರು ಕಾರ್ಮಿಕರ ಹೋರಾಟ ವರ್ಷವಾಗಿ ಮುನ್ನಡೆದು ದೇಶ ರಕ್ಷಣೆ ಮಾಡಬೇಕಾಗಿದೆ. ಕಾರ್ಮಿಕರ ಹಕ್ಕುಗಳನ್ನು ಉಳಿಸಲು, ರೈತರ ಬದುಕನ್ನು ರಕ್ಷಿಸಲು,ಕಾರ್ಪೋರೇಟ್ ಹಿಡಿತದಿಂದ ದೇಶ ಕಾಪಾಡುವಂತೆ ಕಾರ್ಮಿಕರಿಗೆ ಕರೆ ನೀಡಿದರು.
ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕ ಎಚ್ ನರಸಿಂಹ, ದಾಸಭಂಡಾರಿ, ಸುಶೀಲ ನಾಡ,ನಾಗರತ್ನ, ಸಿಂಗಾರಿ, ಆಶಾಲತಾ ಮುಂತಾದವರಿದ್ದರು.
ಕಾರ್ಕಳ ಸಿಐಟಿಯು ಕಛೇರಿಯಲ್ಲಿಯೂ ಕಾಯ್ದೆ ಪ್ರತಿಗಳನ್ನು ದಹಿಸಿ ಪ್ರತಿಭಟಿಸಲಾಯಿತು. ಸುನೀತಾ ಶೆಟ್ಟಿ,ಶೇಖರ ಕುಲಾಲ್ ಇದ್ದರು. ಉಡುಪಿ ಸಿಐಟಿಯು ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಕೆ.ಶಂಕರ್, ವಿಶ್ವನಾಥ ರೈ, ಶಶಿಧರ್ ಗೊಲ್ಲ, ಬಾಲಕೃಷ್ಣ ಶೆಟ್ಟಿ, ಸರೋಜಾ, ರಮೇಶ್ ಮೊದಲಾದವರು ಭಾಗವಹಿಸಿದ್ದರು.
ಉಡುಪಿ ಬನ್ನಂಜೆ ನಾರಾಯಣಗುರು ಸಭಾ ಭವನ ಬಳಿಯಲ್ಲಿ ಮೀನು ಮಾರಾಟಗಾರರ ಸಂಘದ ಮುಖಂಡರು ಮಸೂದೆಯ ಪ್ರತಿಗಳನ್ನು ಆಕ್ರೋಶ ವ್ಯಕ್ತಪಡಿಸಿದರು.
ಕುಂದಾಪುರದಲ್ಲಿ 10 ಹಂಚು ಕಾರ್ಖಾನೆಗಳ ಬಳಿ ನಡೆದ ಪ್ರತಿಭಟನೆಯಲ್ಲಿ ಸುಮಾರು 1200ಕ್ಕು ಹೆಚ್ಚು ಮಂದಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು. ಇದಲ್ಲದೆ, ಕಾಪು, ಕಟಪಾಡಿಗಳಲ್ಲಿ ಕಟ್ಟಡ ಕಾರ್ಮಿಕರು, ಕುಂದಾಪುರದಲ್ಲಿ ಬೀಡಿ ಕಾರ್ಮಿಕರು ಕೂಡಾ ಪ್ರತಿಭಟನೆ ನಡೆಸಿದರು.