ಉಡುಪಿ, ಜ.02 (DaijiworldNews/HR): ಲಾಕ್ಡೌನ್ ಸಮಯದಲ್ಲಿ ಸರಕಾರದ ಹಲವು ನೀತಿಗಳಿಂದ ಅಂಗನವಾಡಿ ಕಾರ್ಯಕರ್ತರಿಗೆ ತುಂಬಾ ತೊಂದರೆಯಾಗಿದೆ. ಬಿಸಿಯೂಟ ಕಾರ್ಯಕರ್ತರಿಗೆ ಸೆಪ್ಟೆಂಬರ್ ತಿಂಗಳಿನಿಂದ ವೇತನ ಸಿಕ್ಕಿಲ್ಲ. ಅಂಗನವಾಡಿ ಕಾರ್ಯಕರ್ತ ರಿಂದ ಅಂಗನವಾಡಿ ಕೆಲಸದ ಜೊತೆಗೆ ಬೇರೆಲ್ಲ ಸರ್ವೇ ಕಾರ್ಯ, ಯೋಜನೆಗಳ ಅನುಷ್ಠಾನದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಆದರೆ ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರು ತಮಗೆ ಗಿಟ್ಟುವ ಕೆಲಸ ಮಾತ್ರ ಮಾಡುತ್ತಾರೆ, ಎಂದು ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯ ಸಮಿತಿ ರಾಜ್ಯ ಉಪಾಧ್ಯಕ್ಷೆ ರಾಜಲಕ್ಷ್ಮಿ ದೂರಿದ್ದಾರೆ.

ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟು ಮೇಲ್ದರ್ಜೆಗೇರಿಸುವ ಬದಲಿಗೆ, ಕೊರೊನಾ ಸಮಯದಲ್ಲಿ ವಿಶೇಷ ಭತ್ಯೆಯನ್ನು ಪ್ರಂಟಲೈನ್ ಕೆಲಸಗಾರರಿಗೆ ಕೊಡದೇ, ನಿವೃತ್ತಿಯಾದ ಅಂಗನವಾಡಿ ನೌಕರರಿಗೆ ಸರಿಯಾದ ಇಡಗಂಟು ಕೊಡಲು ಹಣದಿಲ್ಲ ಎನ್ನುವ ಸರ್ಕಾರ 65 ಸಾವಿರ ಮೊಬೈಲ್ಗಳನ್ನು ವಿತರಿಸಿದೆ. ಇದರ ಅವಶ್ಯಕತೆ ಏನಿತ್ತು" ಎಂದು ಪ್ರಶ್ನಿಸಿದ್ದಾರೆ.
"3 ರಿಂದ 6 ವರ್ಷದ ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯಬೇಕು. ಅವರನ್ನು ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ ತಂದರೆ ಸಾವಿರಾರು ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಬರಬಹುದು. ಐಸಿಡಿಎಸ್ ಯೋಜನೆ ನೀತಿ ಸರಿಯಿಲ್ಲ. ಮಕ್ಕಳಿಗೆ ಪೋಷಕಾಂಶ ಹೆಚ್ಚಲು ಮೊಟ್ಟೆ ಕೊಡಬೇಕೆಂದು ಸರಕಾರ ಹೇಳುತ್ತದೆ. ಆದರೆ ಕಳೆದ ಏಳು ತಿಂಗಳಿನಿಂದ ಮೊಟ್ಟೆ ಖರೀದಿಸಲು ಹಣವೇ ಬಿಡುಗಡೆಯಾಗಿಲ್ಲ. ನಮ್ಮ ಕೈಯಿಂದ ಇನ್ನು ಮುಂದೆ ಹಣ ಹಾಕಿ ಮೊಟ್ಟೆ ಖರೀದಿಸುವುದಿಲ್ಲ" ಎಂದರು.
ಇನ್ನು, "ಬಿಸಿಯೂಟ ನೌಕರರಿಗೆ ಕೂಡಲೇ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಇಲ್ಲದಿದ್ದರೆ ಬಜೆಟ್ ಸೆಷನ್ ಸಮಯದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಡೀ ರಾಜ್ಯದಲ್ಲಿ 1, 25,000 ಅಂಗನವಾಡಿ ಕಾರ್ಯಕರ್ತರು , 1,19,000 ಮಂದಿ ಬಿಸಿಯೂಟ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಉಡುಪಿಯಲ್ಲಿ 2384 ಮಂದಿ ಕಾರ್ಯಕರ್ತರಿದ್ದಾರೆ.
ಕೊರೊನಾ ವಾರಿಯರ್ಸ್ ಆಗಿ 113 ಮಂದಿ ಸೋಂಕಿತರಾಗಿದ್ದು, 27 ಮಂದಿ ಮರಣ ಹೊಂದಿದ್ದು , ಒಬ್ಬರಿಗೆ ಮಾತ್ರ ಸರಕಾರದಿಂದ ಪರಿಹಾರ ಧನ ಸಿಕ್ಕಿದೆ. 35 ಮಂದಿ ಕೆಲಸದೊತ್ತಡದಿಂದ ಮರಣ ಹೊಂದಿದ್ದಾರೆ.
ಅಂಗನವಾಡಿ ಜಿಲ್ಲಾ ಕಾರ್ಯದರ್ಶಿ ಸುಶೀಲ ನಾಡ, ಸಿಐ.ಟಿ.ಯು, ತಾಲೂಕು ಕಾರ್ಯದರ್ಶಿ ಕವಿರಾಜ್, ಅಂಗನವಾಡಿ ಜಿಲ್ಲಾ ಅಧ್ಯಕ್ಷರು ಭಾರತಿ, ಉಡುಪಿ, ಬಾಲಕೃಷ್ಣ ಶೆಟ್ಟಿ, ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷರು ಉಪಸ್ಥಿತರಿದ್ದರು.