ಬೆಳ್ತಂಗಡಿ , ಜೂ25: ಧರ್ಮಸ್ಥಳಕ್ಕೆ ಆಗಮಿಸಬೇಕಾಗಿದ್ದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರ ಸಚಿವ ಜಮೀರ್ ಅಹ್ಮದ್ ಅರ್ಧ ದಾರಿಯಿಂದಲೇ ವಾಪಾಸ್ ತೆರಳಿದ ಘಟನೆ ಜೂ 25 ಸೋಮವಾರ ನಡೆದಿದೆ. ಅವರು ಇಂದು ಧರ್ಮಸ್ಥಳದಲ್ಲಿ ಇಲಾಖಾ ಅಧಿಕಾರಿಗಳ ಜೊತೆ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿತ್ತು.
ಅದಕ್ಕಾಗಿ ಅವರು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು. ಆದರೆ ಸಕಲೇಶಪುರ ತಲುಪುತ್ತಿದ್ದಂತೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಹಾರಾಟಕ್ಕೆ ತೊಂದರೆಯಾಗಿತ್ತು ಎನ್ನಲಾಗಿದೆ. ಹೀಗಾಗಿ ತನ್ನ ಧರ್ಮಸ್ಥಳ ಪ್ರವಾಸವನ್ನು ಮೊಟಕುಗೊಳಿಸಿ ಅಲ್ಲಿಂದ ಬೆಂಗಳೂರಿಗೆ ಹಿಂತಿರುಗಬೇಕಾಯಿತು.