ಕಾರ್ಕಳ, ಜ. 02 (DaijiworldNews/MB) : ಕ್ಷುಲಕ ಕಾರಣದಿಂದ ಉಂಟಾದ ಜಗಳದಲ್ಲಿ ಅಳಿಯನೊಬ್ಬ ಬಾರಿಸಿದ ಏಟಿಗೆ ಮಾವ ಜೀವ ಕಳೆದುಕೊಂಡ ಘಟನೆ ನಗರದ ಹಂಚಿಕಟ್ಟೆಯ ಫ್ಲಾಟ್ ಒಂದರಲ್ಲಿ ನಡೆದಿದೆ.

ಶೇಖ್ ಅಬೂಬಕ್ಕರ್ (57) ಘಟನೆಯಲ್ಲಿ ಜೀವ ಕಳೆದುಕೊಂಡವರು.
ಡಿಸೆಂಬರ್ 31ರ ರಾತ್ರಿ 8.00ಗಂಟೆಗೆ ಫ್ಲಾಟ್ನಲ್ಲಿ ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್ನ ಎಡ ಕೆನ್ನೆಗೆ ಹೊಡೆದು ಬಲವಾಗಿ ದೂಡಿ ಹಾಕಿದ್ದರಿಂದ ನೆಲಕ್ಕೆ ಬಿದ್ದರು. ಎದ್ದೇಳುವ ಸ್ಥಿತಿಯಲ್ಲಿ ಇಲ್ಲದ ಶೇಖ್ ಅಬೂಬಕ್ಕರ್ ಅವರ ಮಮಾಂಗಕ್ಕೆ ತೌಫಿಕ್ ಕಾಲಿನಿಂದ ತುಳಿದಿದ್ದನು.
ತೀವ್ರತರದಲ್ಲಿ ಗಾಯಗೊಂಡಿದ್ದ ಶೇಖ್ ಅಬೂಬಕ್ಕರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಶೇಖ್ ಅಬೂಬಕ್ಕರ್ ಜನವರಿ 1ರ ತಡರಾತ್ರಿ ಮೃತಪಟ್ಟಿ ಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ