ಮಂಗಳೂರು, ಜೂ 25: ದೇಶಕ್ಕೆ ಮಾದರಿಯಾಗುವಂತೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ರೂಪುರೇಷೆಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದರು. ನಗರದಲ್ಲಿ ಜೂ 25 ರ ಸೋಮವಾರ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ)ದ ಕಚೇರಿಯಲ್ಲಿಂದು ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಸಭೆಯ ಬಳಿಕ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಮಾಹಿತಿ ನೀಡಿದರು.
ತ್ವರಿತ ಗತಿಯಲ್ಲಿ ಚಾಲನೆ ನೀಡಲು ಉದ್ದೇಶಿಸಿರುವ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಲು ಯೋಜನೆಯ ಆಡಳಿತ ನಿರ್ದೇಶಕ (ಎಂ.ಡಿ) ಅವರಿಗೆ ಸುಪ್ರಿಂ ಪವರ್ ನೀಡಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗೆ ನಿಯೋಜನೆಗೊಂಡ ಅಧಿಕಾರಿಗಳು, ಗುತ್ತಿಗೆದಾರರು ಕರ್ತವ್ಯವನ್ನು ಸರಿಯಾಗಿ ಪಾಲಿಸಿದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಎಂ.ಡಿ ಗೆ ನೀಡಲಾಗಿದ್ದು, ಯೋಜನೆಗೆ ಸಂಬಂಧಿಸಿದಂತೆ ಆಡಳಿತ ನಿರ್ದೇಶಕರು ಪ್ರತೀ 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು
ಜನ ಬೆಂಬಲವಿಲ್ಲದೆ ಯೋಜನೆಯ ಅನುಷ್ಟಾನ ಅಸಾಧ್ಯ. ರಸ್ತೆ ವಿಸ್ತರಣೆ, ಒಳಚರಂಡಿಗಳು ನಿರ್ಮಾಣ, ಮೂಲಸೌಕರ್ಯಗಳು, ಸೇತುವೆಗಳ ನಿರ್ಮಾಣ ಈ ಎಲ್ಲವನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಲಾಗಿದೆ. ಕೆಲವೊಂದು ಸಂದರ್ಭದಲ್ಲಿ ಭೂ ಸ್ವಾಧೀನ ಸಾಧ್ಯತೆಗಳು ಕಂಡು ಬಂದಲ್ಲಿ ಜನರು ಅಧಿಕಾರಿಗಳೊಂದಿಗೆ ಸಹಕರಿಸಿ ಯೋಜನೆಯನ್ನು ಬೆಂಬಲಸಬೇಕು ಎಂದು ವಿನಂತಿಸಿಕೊಂಡರು.
ಯೋಜನೆಯ ಪ್ರಗತಿಯ ಮೌಲ್ಯಮಾಪನಕ್ಕಾಗಿ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಡಳಿತ ಮಂಡಳಿ ಸಭೆ ನಡೆಸಬೇಕು. ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜತೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರು ಸಭೆ ಮಾಡಿ ಮೇಲ್ವಿಚಾರಣಾ ಕೆಲಸ ಮಾಡಲಿದ್ದೇವೆ ಎಂದು ಸಚಿವ ಖಾದರ್ ಹೇಳಿದರು.
ಈ ಸಂದರ್ಭ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ವೇದವ್ಯಾಸ್ ಕಾಮತ್, ಶಾಸಕ ವೈ ಭಾರತ್ ಶೆಟ್ಟಿ, ಮೇಯರ್ ಭಾಸ್ಕರ್ ಮೊಯಿಲಿ, ಉಪಸ್ಥಿತರಿದ್ದರು.