ಕುಂದಾಪುರ, ಜೂ 25: ಗ್ರಾಮಸ್ಪಂದನ ಕಾರ್ಯಕ್ರಮದ ಕುದುರೆಯನ್ನು ಗೋಪಾಲಕೃಷ್ಣ ಸನ್ನಿದಾನದಿಂದಲೇ ಬಿಟ್ಟಿದ್ದೇವೆ. ಇದೀಗ ಕ್ಷೇತ್ರದಲ್ಲಿ ದುಶ್ಚಟಗಳ ವಿರುದ್ದ ಪರಿವರ್ತನೆ ಯಾತ್ರೆಯೂ ಇಲ್ಲಿಂದಲೇ ಆರಂಭವಾಗುತ್ತದೆ. ಮಟ್ಕಾ, ಗಾಂಜಾ, ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಲ್ಲಿ ಯಾವ ಪ್ರಬಲ ಶಕ್ತಿ ಅಡ್ಡ ಬಂದರೂ ಎದುರಿಸಿ ಆರೋಗ್ಯಕರ ಸಮಾಜ ನಿರ್ಮಾಣವೇ ನನ್ನ ಗುರಿ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು.
ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಉಪ್ಪಿನಕುದ್ರು ಭಾಗದ ಜನರ ಸಮಸ್ಯೆ ಆಲಿಸಿದ್ದೇನೆ. ಇಲ್ಲಿಗೆ ಅಗತ್ಯವಿರುವ ಸರ್ಕಾರಿ ಬಸ್ ಸೇವೆಯನ್ನು ನೀಡುವ ಬಗ್ಗೆ ಕೆಎಸ್ಆರ್ಟಿಸಿ ಡಿಸಿ ಅವರಲ್ಲಿ ಮಾತನಾಡಿ, ಶೀಘ್ರವಾಗಿ ಇಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಅಭಿನಂದನೆ ಸಲ್ಲಿಸಿ, ಉಪ್ಪಿನಕುದ್ರು ಗ್ರಾಮಕ್ಕೆ ಅಗತ್ಯವಿರುವ ಬೇಡಿಕೆಗಳ ಮನವಿಯನ್ನು ಗ್ರಾಮಸ್ಥರ ಪರವಾಗಿ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ರಮೇಶ ಕಾರಂತ ಅವರು ಶಾಸಕರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ದೀಪಕಕುಮಾರ ಶೆಟ್ಟಿ, ಬಾಲಚಂದ್ರ ಭಟ್, ಯುವ ಮೋರ್ಛಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಸ್ಥಳೀಯ ಪ್ರಮುಖರಾದ ಕೃಷ್ಣಮೂರ್ತಿ ಐತಾಳ್, ರಾಧಾಕೃಷ್ಣ ಶೇರಿಗಾರ್, ರಘುರಾಮ ಶೆಟ್ಟಿ ತಲ್ಲೂರು, ಸಂಜೀವ ದೇವಾಡಿಗ, ಶಿವಾನಂದ, ರವಿ ಗಾಣಿಗ ಮಲ್ಲಾರಿ, ರಾಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಪ್ರಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರಿಗೆ ಉಪ್ಪಿನಕುದ್ರುವಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ವಾರಾಹಿ ನೀರನ್ನು ಒದಗಿಸುವಂತೆ, ಆನೇಕ ಬಸ್ಗಳಿಗೆ ಉಪ್ಪಿನಕುದ್ರುವಿಗೆ ಪರವಾನಿಗೆ ಇದ್ದರೂ ಬಸ್ ಬರುತ್ತಿಲ್ಲ. ಹಾಗಾಗಿ ಸರ್ಕಾರಿ ಬಸ್ ಓಡಿಸಬೇಕು ಎನ್ನುವ ಮನವಿ ಸಲ್ಲಿಸಲಾಯಿತು.