ಬೆಂಗಳೂರು, ಜೂ 26: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಪರಶುರಾಮ್ ವಾಗ್ಮೋರೆಯನ್ನು 2 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ 3 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
14 ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ವಾಗ್ಮೋರೆಯನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್, ಆರೋಪಿಗೆ 2 ದಿನ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ಹೊರಡಿಸಿದೆ .
ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜೂ.27ರಂದು ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಕೋರ್ಟ್ ಅಂದು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಇನ್ನು ಅತ್ತ ಕಡೆ ಎಸ್ಐಟಿ ತನಿಖೆಗೆ ಪರಶುರಾಮ್ ವಾಗ್ಮೋರೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು, ತನ್ನ ಪೋಷಕರನ್ನು ನೋಡಬೇಕು ಎಂದು ಕೇಳಿಕೊಂಡಿದ್ದ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಎಸ್ಐಟಿ ವಿಭಾಗದಲ್ಲಿ ತಾಯಿ ಮತ್ತು ತಂದೆಯನ್ನು ಭೇಟಿ ಮಾಡಲು ವಾಗ್ಮೋರೆಗೆ ಜೂ.24 ರಂದು ಅವಕಾಶ ಮಾಡಿಕೊಡಲಾಗಿತ್ತು.