ನೆಲ್ಯಾಡಿ, ಜ. 04 (DaijiworldNews/MB): ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಯುವತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.


ನೆಲ್ಯಾಡಿ ನವೀನ್ ಇಂಟರ್ಲಾಕ್ ಮಾಲಕ, ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ ಎಂಬವರ ಪುತ್ರಿ ನವ್ಯಾ ಜೋಸೆಫ್ (21) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ್ದ ನವ್ಯಾ ಬಳಿಕ ಮನೆಯಲ್ಲಿದ್ದರು. ಜ.3ರಂದು ರಾತ್ರಿ ಸುಮಾರು 10:30ರ ವೇಳೆಗೆ ತನ್ನ ಕೊಠಡಿಯೊಳಗೆ ಮಲಗಿದ್ದ ನವ್ಯಾ ಜ.4ರಂದು ಬೆಳಿಗ್ಗೆ 8 ಗಂಟೆಯಾದರೂ ಬಾಗಿಲು ತೆರೆಯದೇ ಇದ್ದ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್ಗೆ ತಾಯಿ ಕರೆಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ತಂದೆ ವಿ.ಜೆ.ಜೋಸೆಫ್ರವರು ಬಾಗಿಲು ಮುರಿದು ಒಳಪ್ರವೇಶಿಸಿದ ವೇಳೆ ನವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಆಕೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ನವ್ಯಾ ತಂದೆ ವಿ.ಜೆ.ಜೋಸೆಫ್, ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.