ಮಂಗಳೂರು, ಜೂ 26: ಎಳೆಯ ಮಕ್ಕಳ ಕಲಿಕೆಯ ವಾತಾವರಣಕ್ಕೆ ಸ್ವಚ್ಚ ಪರಿಸರ , ಸಾಕಷ್ಟು ಬೆಳಕು , ಹೀಗೆ ಪೂರಕವಾದ ವ್ಯವಸ್ಥೆಗಳು ಬೇಕು.. ಆದರೆ ಸುತ್ತ ಮುತ್ತಲು ದಟ್ಟವಾಗಿ ಬೆಳೆದಿದ್ದ ಪೊದೆ..ಮುಚ್ಚಿಟ್ಟಿದ್ದ ಕಿಟಕಿ ಬಾಗಿಲು..ಕತ್ತಲೆಯಲ್ಲಿ ಕುಳಿತಿದ್ದ ಮಕ್ಕಳು .. ಈ ರೀತಿಯ ವಾತಾವರಣ ಕಂಡು ಬಂದಿದ್ದು ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರಕ್ಕೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಸೋಮವಾರ ಭೇಟಿ ನೀಡಿದ ಸಂದರ್ಭ.
ಇದರಿಂದ ಗರಂ ಆದ ಲೋಕಾಯುಕ್ತರು ಕಿಟಕಿಗಳನ್ನು ಮುಚ್ಚಿ ಮಕ್ಕಳನ್ನು ಕತ್ತಲೆಯಲ್ಲಿ ಯಾಕೆ ಕುಳ್ಳಿರಿಸಿದ್ದೀರಿ ಎಂದು ಪ್ರಶ್ನಿಸಿದರು. ಆಗ ಪರಿಸರದಲ್ಲಿರುವ ಸೊಳ್ಳೆಗಳಿಂದ ರಕ್ಷಣೆ ಒದಗಿಸಲು ಎನ್ನುವ ಉತ್ತರ ಅಂಗನವಾಡಿ ಕಾರ್ಯಕರ್ತೆ ಯಿಂದ ದೊರೆಯಿತು..
ತಕ್ಷಣ ಅಧಿಕಾರಿಗಳನ್ನು ಕರೆದು ಅಂಗನವಾಡಿ ಸುತ್ತಲೂ ಬೆಳೆದಿರುವ ಹುಲ್ಲು ಪೊದೆಗಳನ್ನು ಕತ್ತರಿಸಲು ಹೆಚ್ಚು ಖರ್ಚು ಬೀಳದು.ಪರಿಸರ ಸ್ವಚ್ಚಗೊಳಿಸಿ.. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಲೋಕಾಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಈ ಸಂದರ್ಭ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ವೈ ಶಿವರಾಮಯ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ್ ಪೂಜಾರಿ , ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಗೀತಾ , ಕ್ಷೇತ್ರ ಶಿಕ್ಷಣ ಅಧಿಕಾರಿ ಮಂಜುಳಾ ಉಪಸ್ಥಿತರಿದ್ದರು. ಅಂಗನವಾಡಿ ಭೇಟಿಯ ಬಳಿಕ ನಡೆದ ಲೋಕಾಯುಕ್ತ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತರು ಭಾಗವಹಿಸಿದರು. ಲೋಕಾಯುಕ್ತ ಎಸ್ಪಿ ರಶ್ಮಿ ಭಾಗವಹಿಸಿದ್ದರು.