ಉಡುಪಿ, ಜೂ 26: ಕಳೆದೆರಡು ದಿನಗಳಿಂದ ಮೀನಿಗೆ ರಾಸಾಯಾನಿಕ ಪದಾರ್ಥಗಳನ್ನು ಮಿಶ್ರ ಮಾಡಲಾಗುತ್ತಿದೆ ಎನ್ನುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಗೂ ಮಹಿಳಾ ಮೀನು ಮಾರಾಟಗಾರರಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಆದುದರಿಂದ ಗ್ರಾಹಕರು ಈ ಹಿಂದಿನಂತೆ ಮೀನನ್ನು ಖರೀದಿಸಿ ಸೇವಿಸಬಹುದು. ಅಲ್ಲದೆ ಈ ಬಗ್ಗೆ ಯಾವುದೇ ಗೊಂದಲ ಆತಂಕ ಅಗತ್ಯವಿಲ್ಲ ಎಂದು ದ.ಕ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ ತಿಳಿಸಿದ್ದಾರೆ.
ಮಹಿಳಾ ಮೀನು ಮಾರಾಟಗಾರರು ತಮ್ಮ ಸಾಂಪ್ರದಾಯಿಕ ಕುಲಕಸುಬಾದ ಮೀನು ಮಾರಾಟ ವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದು, ಮೀನಿಗೆ ಯಾವುದೇ ರಾಸಾಯನಿಕ ಬಳಸದೆ ತಾಜಾ ಮೀನನ್ನು ನೇರವಾಗಿ ಮೀನುಗಾರರಿಂದ ಗ್ರಾಹಕರಿಕೆ ತಲುಪಿಸುವ ಕಾರ್ಯದಲ್ಲಿ ವಿಶ್ವಾಸ ಗಳಿಸಿದೆ.
ಇತ್ತೀಚಿಗೆ ಕೇರಳ ರಾಜ್ಯದ ಹಲವೆಡೆ ಅಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದಾಗ ಕೆಲವು ಮಾಲ್ ಮತ್ತು ಅಂಗಡಿ ಮಳಿಗೆಗಳಲ್ಲಿ ಮೀನನ್ನು ತಾಜಾ ಸಂರಕ್ಷಿಸಿಡಲು ಹಾನಿಕಾರಕ ಫಾರ್ಮಾಲಿನ್ ಬಳಕೆ ಮಾಡಿದ್ದು, ಇಂತಹ ಸುಮಾರು 6000 ಕಿ. ಗ್ರಾ ಮೀನನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಮೀನು ಮಾರಾಟಗಾರರು ಎಂದಿನಂತೆ ಗ್ರಾಹಕರಿಗೆ ಮೀನನ್ನು ಒದಗುತ್ತಿದ್ದಾರೆ. ಈಗಾಗಲೇ ಮತ್ಸಕ್ಷಾಮ ವದಂತಿಗಳಿಂದ ತೀವ್ರ ತೊಂದರೆ ಗೊಳಗಾದ ಮೀನುಗಾರರಿಗೆ ಸೂಕ್ತ ನ್ಯಾಯ ಒದಗಿಸಿ ಹಾನಿಕಾರಕ ರಾಸಾಯನಿಕ ಬಳಸುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಮತ್ಸ್ಯ ಗ್ರಾಹಕರಲ್ಲಿರುವ ಗೊಂದಲಗಳನ್ನು ಪರಿಹರಿಸಬೇಕೆಂದು ಅಧ್ಯಕ್ಷ ಯಶ್ ಪಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ