ಉಡುಪಿ : ಸ.27- ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ನೌಕರರೊಬ್ಬರಿಗೆ ಮಹಿಳೆಯೊಬ್ಬರು ಕೆನ್ನೆಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ 40ರ್ಷಗಳಿಂದ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ಖಾಯಂ ನೌಕರರಾಗಿದ್ದ ದೇವಯ್ಯ ಹೆಬ್ಬಾರ್ (56) ಎಂಬವರು ಸೆ. 24 ರಂದು ರಾತ್ರಿ 9.15ರ ಸುಮಾರಿಗೆ ದೇವಸ್ಥಾನದ ಒಳ ಪ್ರಾಂಗಣದಲ್ಲಿ ದೇವರ ಸೇವೆಯ ಬಲಿ ನಡೆಯುತ್ತಿದ್ದಾಗ ಐಶ್ವರ್ಯ ಎಂಬವರು ದೇವಯ್ಯ ಹೆಬ್ಬಾರನ್ನು ತಡೆದು ಅವರು ಧರಿಸಿದ್ದ ಶಾಲನ್ನು ಎಳೆದು ಎಡ ಕೆನ್ನೆಗೆ ಹೊಡೆದು ದೇವರ ಪೂಜಾ ಕಾರ್ಯ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ಧಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೇವಯ್ಯ ಹೆಬ್ಬಾರ್ ಅವರು ರಾತ್ರಿ 8 ಗಂಟೆಗೆ ದೇವರಿಗೆ ನೈವೇದ್ಯ ಅರ್ಪಿಸುವ ಸಮಯ ಗರ್ಭಗುಡಿ ಒಳಾಂಗಣದಲ್ಲಿರುವ ಭಕ್ತಾಧಿಗಳನ್ನು ಹೊರಗಡೆ ಕಳುಹಿಸಿದ್ದು ,ಈ ವೇಳೆ ಮಗುವಿನೊಂದಿಗೆ ಅಲ್ಲೇ ಇದ್ದ ಭಕ್ತಾದಿ ಐಶ್ವರ್ಯ ಅವರನ್ನು ಕೂಡಾ ಹೊರ ಹೋಗುವಂತೆ ತಿಳಿಸಿದ್ದರು. ಆಗ ಮಹಿಳೆ ಸಿಟ್ಟಿಗೆದ್ದು ದೇವಯ್ಯನವರಿಗೆ ಕಪಾಳ ಮೋಕ್ಷ ಮಾಡಿ ಬೆದರಿಕೆ ಹಾಕಿ ಹೊರ ನಡೆದಿದ್ದರು ಎಂದು ದೂರಲಾಗಿದೆ.