ಕೋಟ, ಜ.05 (DaijiworldNews/HR): ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅವರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎಂಬಲ್ಲಿ ನಡೆದಿದೆ.



ಮಹಾಕಲಿ ಮಗದೇಂದ್ರ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಪ್ರಸಂಗದಲ್ಲಿ ಸಾಧು ಕೊಠಾರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಂಗದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡರು. ಬಳಿಕ ವೇಷ ಕಳಚಿ, ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹಕಲಾವಿದರು, ಸ್ಥಳೀಯರು ಜತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಇನ್ನು ಸಾಧು ಕೊಠಾರಿ ಅವರು ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದು, ಸುಮಾರು 40 ವರ್ಷಕ್ಕೂ ಅಧಿಕ ಸಮಯ ಯಕ್ಷ ತಿರುಗಾಟ ನಡೆಸಿದ್ದರು.