ಉಡುಪಿ, ಜ. 05 (DaijiworldNews/MB) : ಉಡುಪಿ ಜನರ ಬಹು ಕನಸಿನ ರಸ್ತೆ ಬ್ರಹ್ಮಾವರ ಚೇರ್ಕಾಡಿ ಚತುಷ್ಪಥಕ್ಕೆ ಪೂರಕವಾಗಿ ಒಂದು ವರ್ಷಗಳ ನಂತರ ಇಕ್ಕೆಲದಲ್ಲಿರುವ ಮರ ತೆರವಿದೆ ಗ್ರೀನ್ ಸಿಗ್ನಲ್ ಸಿಕ್ಕಿ ಮರ ಕಟಾವು ಕೆಲಸ ಅದಾಗಲೇ ಸಾಕಷ್ಟು ಮುಂದುವರಿದಿದೆ.
















ತೆರವು ಕಾರ್ಯದ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಈಗಾಗಲೇ ಉಡುಪಿ ಶಾಸಕರ ನಿರಂತರ ಶ್ರಮ ಮತ್ತು ಪಟ್ಟು ಹಿಡಿದು ಕೆಲಸ ಮಾಡಿದರಿಂದ ಈ ರಸ್ತೆ ಅಗಲೀಕರಣ ನಡೆಯುತ್ತಿದೆ.
ಚತುಷ್ಪಥಕ್ಕಾಗಿ ಪ್ರಥಮ ಹಂತದಲ್ಲಿ 1,014 ಮರಗಳನ್ನು ಕಡಿಯಲು ಅನುಮತಿ ಸಿಕ್ಕಿದ್ದು 7 ಕಿ.ಮೀ ರಸ್ತೆ ಬದಿಯಲ್ಲಿರುವ ಮರಗಳ ತೆರವು ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಎರಡನೇ ಹಂತದಲ್ಲಿ ಸುಮಾರು 500 ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡುವ ಸಾಧ್ಯತೆ ಇದೆ.
ಬ್ರಹ್ಮಾವರದಿಂದ ಚೇರ್ಕಾಡಿವರೆಗೆ ಚತುಷ್ಪಥ ರಸ್ತೆಗೆ ಸರಕಾರದಿಂದ ಈಗಾಗಲೇ ರೂ. 28 ಕೋಟಿ ಮಂಜೂರಾಗಿರುತ್ತದೆ. ಪ್ರಥಮ ಹಂತದಲ್ಲಿ ಬ್ರಹ್ಮಾವರದಿಂದ ಕುಂಜಾಲುವಿನಿಂದ ತಕ್ಷಣ ಕಾಮಗಾರಿಯು ಪ್ರಾರಂಭ ಆಗುತ್ತದೆ ಎಂದು ಶಾಸಕರು ಭರವಸೆ ನೀಡಿದ್ದಾರೆ. ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರಿಟೀಕೃತ ರಸ್ತೆ ಈಗಾಗಲೇ ನಿರ್ಮಾಣವಾಗಿದೆ.
ಕಳೆದ ವರ್ಷ ಸಾವಿರಕ್ಕೂ ಹೆಚ್ಚು ಮರ ಕಡಿಯುವ ನಿರ್ಧಾರಕ್ಕೆ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಇದಕ್ಕೆ ಆಕ್ಷೇಪವೆತ್ತಿದ್ದರು. ಈ ಕಾರಣದಿಂದ ಒಟ್ಟಾರೆ ಕಾಮಗಾರಿ ಒಂದು ವರ್ಷ ವಿಳಂಬವಾಗಿದೆ. ಮರ ಕಟಾವು ಪ್ರಕ್ರಿಯೆ ಟೆಂಡರ್ ಮೂಲಕ ನಡೆಯಬೇಕಿತ್ತು. ರೂ. 14 ಲಕ್ಷ ಟೆಂಡರ್ ಕೂಡ ಆಗಿದೆ. ಆದರೆ ಇದೀಗ ಅರಣ್ಯ ಇಲಾಖೆಯಿಂದಲೇ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮರ ಕಟಾವು ಪ್ರಕ್ರಿಯೆ ನಡೆಯುತ್ತಿದೆ.
ಅಗತ್ಯ ಏನು? ರಸ್ತೆ ಅಗಲೀಕರಣದಿಂದ ಏನು ಲಾಭ?
ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ರಸ್ತೆ ಅಗಲೀಕರಣದ ಅವಶ್ಯಕತೆ ತುಂಬಾ ಇದೆ. ಬ್ರಹ್ಮಾವರದಿಂದ ಪೇತ್ರಿ ತನಕ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಪೇತ್ರಿ ರಸ್ತೆಯು ಹಲವು ಊರುಗಳಿಗೆ ಸಂಪರ್ಕ ಕೊಂಡಿಯಾಗಿದೆ. ಖಾಸಗಿ ಬಸ್ಗಳಲ್ಲದೆ ನೂರಾರು ಶಾಲಾ ಬಸ್ಗಳು ಸಂಚಾರ ಹೆಚ್ಚುತ್ತವೆ.