ಮಂಗಳೂರು, ಜ. 05 (DaijiworldNews/MB) : ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ನರ್ಸಿಂಗ್ ಕಾಲೇಜುಗಳು ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಹಲವಾರು ಇಲಾಖೆಗಳು ಮಾಡುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಕೇರಳದ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕಾಲೇಜಿನಲ್ಲಿ ಕೊರೊನಾ ಮಾರ್ಗಸೂಚಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದೆ.

ಕಳೆದ ವಾರ ನರ್ಸಿಂಗ್ ಕಾಲೇಜಿನ 78 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈಗ, ಜನವರಿ 4 ಸೋಮವಾರ, ಮತ್ತೊಂದು ಕಾಲೇಜಿನ ಆರು ವಿದ್ಯಾರ್ಥಿಗಳು ಕೊರೊನಾ ಪಾಸಿಟಿವ್ ಆಗಿದೆ. ಇನ್ನು ಕೊರೊನಾ ದೃಢಪಟ್ಟವರಲ್ಲಿ ಬಹುತೇಕ ಸೋಂಕಿತ ವಿದ್ಯಾರ್ಥಿಗಳು ಕೇರಳದವರಾಗಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಮಾರ್ಗಸೂಚಿ ಪ್ರಕಾರ, ಇತರ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳು ಇಲ್ಲಿಗೆ ಬರುವ 72 ಗಂಟೆಗಳ ಒಳಗೆ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಮತ್ತು ನೆಗೆಟಿವ್ ವರದಿ ಹೊಂದಿರಬೇಕು.
ನರ್ಸಿಂಗ್ ಕಾಲೇಜಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ, ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಹಾಗೆಯೇ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ನರ್ಸಿಂಗ್ ಕಾಲೇಜಿಗೆ ಶೋಕಾಸ್ ನೊಟೀಸ್ ನೀಡಲಾಗಿತ್ತು. ಆದರೆ ಕಾಲೇಜು ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಕಾರಣ, ಕಾಲೇಜು ಆವರಣದ ಸುತ್ತಲೂ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಪ್ರಸ್ತುತ ಆರು ಕೊರೊನಾ ಸೋಂಕಿತರು ಪತ್ತೆಯಾದ ನರ್ಸಿಂಗ್ ಕಾಲೇಜಿಗೆ ಸಹ ನೋಟಿಸ್ ನೀಡಲಾಗಿದೆ.