ಬೆಳ್ತಂಗಡಿ, ಜ. 05 (DaijiworldNews/MB) : ಡಿಸೆಂಬರ್ 30 ರಂದು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಹೊತ್ತಿರುವ ಪವನ್ ಶೆಟ್ಟಿ ಉಜಿರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ''ನಾನು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿದವರ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದ್ದು, ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.

ವಿಜಯೋತ್ಸವ ನಡೆದ ದಿನ, ನಾನು ಉಜಿರೆಗೆ ಮಾತ್ರ ಭೇಟಿ ನೀಡಿದ್ದು ವಾಪಾಸ್ ಬಂದಿದ್ದೇನೆ. "ನಾನು ಇಡೀ ದಿನ ಅಲ್ಲಿ ನೀಲಿ ಶರ್ಟ್ ಧರಿಸಿದ್ದೆ. ನಾನು ಬಿಳಿ ಶರ್ಟ್ ಧರಿಸಿದ್ದ ಫೋಟೋವನ್ನು ಯಾರೋ ಬಳಸಿದ್ದು ನನ್ನ ವಿರುದ್ಧ ಪಿತೂರಿ ಹೂಡಿದ್ದಾರೆ. ನಾನು ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಚಾರ ದೊಡ್ಡ ಸುಳ್ಳು" ಎಂದು ಪ್ರತಿಪಾದಿಸಿದರು.
''ಪವನ್ ಶೆಟ್ಟಿ ತಾನು ನೀಡಿರುವ ದೂರಿನಲ್ಲಿ ಮೂವರ ಹೆಸರನ್ನು ಉಲ್ಲೇಖಿಸಲಾಗಿದೆ'' ಎಂದು ತಿಳಿಸಿದರು. ''ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋದೊಂದಿಗೆ ಪೋಸ್ಟ್ ಅಪ್ಲೋಡ್ ಮಾಡುವ ಮೂಲಕ ಕೆಲವರು ನನ್ನನ್ನು ದೂಷಿಸಲು ಪ್ರಯತ್ನಿಸಿದ್ದಾರೆ. ನಾನು ಪಾಕಿಸ್ತಾನವನ್ನು ಹೊಗಳಿಲ್ಲ. ಭವಿಷ್ಯದಲ್ಲಿ ಎಂದಿಗೂ ಪಾಕಿಸ್ತಾನವನ್ನು ಹೊಗಳುವುದಿಲ್ಲ. ಎಸ್ಡಿಪಿಐ ಕಾರ್ಯಕರ್ತರು ನನ್ನ ಬಗ್ಗೆ ದುರುದ್ದೇಶದಿಂದ ಈ ಸುಳ್ಳು ಮಾಹಿತಿ ಹರಡಿದ್ದಾರೆ'' ಎಂದು ಆರೋಪಿಸಿದರು.
ಡಿಸೆಂಬರ್ 30 ರಂದು ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಾಗ, ಬಿಜೆಪಿ ಮತ್ತು ಎಸ್ಡಿಪಿಐ ಕಾರ್ಯಕರ್ತರು ಉಜಿರೆಯ ಮತ ಎಣಿಕಾ ಕೇಂದ್ರದ ಸಮೀಪ ಜಮಾಯಿಸಿದ್ದರು. ಅವರು ಬೆಂಬಲಿಸಿದ ಅಭ್ಯರ್ಥಿಗಳು ಗೆದ್ದಾಗ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಈಗಾಗಲೇ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.