ಜೂನ್ 26 : ನಾನು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ತೀರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಭಾರತದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಆದರೆ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ಇಲ್ಲಿ ತನಕ ಬಂದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಉದ್ಯಮಿ ವಿಜಯ್ ಮಲ್ಯ.
ಸಾವಿರಾರು ಕೋಟಿ ಬ್ಯಾಂಕ್ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವೊಂದನ್ನು ಬಹಿರಂಗ ಪಡಿಸಿದ್ದು, ಬಾಕಿ ಮೊತ್ತ ಪಾವತಿಗೆ ನನ್ನ ಯತ್ನ ನಡೆದಿದೆ ಎಂದು ಪತ್ರ ಬರೆದಿದ್ದೆ. ಆದರೆ ನನ್ನ ಪತ್ರಕ್ಕೆ ಪ್ರಧಾನಿ ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ. ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರವನ್ನು ಇಂದು ಬಹಿರಂಗಪಡಿಸಿದ ಅವರು ನಾನು ೨೦೧೬ರಲ್ಲೇ ಪತ್ರ ಬರೆದು, ಸಾಲ ತೀರಿಸುವ ಬಗ್ಗೆ ಪ್ರಧಾನಿ ಹಾಗೂ ಹಣಕಾಸು ಸಚಿವರಿಬ್ಬರಿಗೂ ಕೇಳಿಕೊಂಡಿದ್ದೆ ಆದರೆ, ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ಇಲ್ಲಿ ತನಕ ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನನ್ನನ್ನು ಬ್ಯಾಂಕ್ ಹಗರಣಗಳ ಪೋಸ್ಟರ್ ಬಾಯ್ ಮಾಡಲಾಗಿದೆ ಎಂದು ದೂರಿದ್ದಾರೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಸರ್ಕಾರಿ ಸ್ವಾಮ್ಯ ಬ್ಯಾಂಕ್ ಗಳಲ್ಲಿ 9,000 ಕೋಟಿಗೂ ಹೆಚ್ಚು ಮೌಲ್ಯದ ಸಾಲ ಬಾಕಿ ಇರಿಸಿ 2016 ರಲ್ಲಿ ಲಂಡನ್ ಗೆ ಪರಾರಿಯಾಗಿದ್ದರು