ಮಂಗಳೂರು, ಜ. 06 (DaijiworldNews/MB) : ಗ್ರಾಮಸ್ಥರು ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಅವರು ಅರ್ಹರು ಎಂದು ಸಾಬೀತುಪಡಿಸಲು ಕುಡಿಯುವ ನೀರಿನ ಅಗತ್ಯತೆಗಳು, ಚರಂಡಿಗಳು, ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವುದು ಇತ್ಯಾದಿಗಳನ್ನು ಚುನಾಯಿತ ಪ್ರತಿನಿಧಿಗಳು ಮಾಡಬೇಕಾಗಿದೆ. ಗ್ರಾಮಗಳನ್ನು ಆರೋಗ್ಯಕರ, ಸುಂದರವಾಗಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ್ದಾಗಿದೆ.

ಕೊರೊನಾ ಕಾರಣದಿಂದಾಗಿ ವಿದೇಶದಲ್ಲಿ ಅಥವಾ ಭಾರತದ ಇತರ ಸ್ಥಳಗಳಲ್ಲಿ ಉದ್ಯೋಗ ಕಳೆದುಕೊಂಡ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ. ಅವರ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ಒದಗಿಸಲು ಸ್ಥಳೀಯಾಡಳಿತ ಅವರಿಗೆ ಸಹಾಯ ಮಾಡಬೇಕಾಗಿದೆ. ಹಲವಾರು ತಿಂಗಳುಗಳಿಂದ ಮುಚ್ಚಿದ ಶಾಲೆಗಳು ಈಗ ಮತ್ತೆ ತೆರೆದಿದ್ದು ಶಾಲೆಗಳಿಗೆ ಬೇಕಾದ ಮೂಲಸೌಕರ್ಯ ಒದಗಿಸುವುದು ಕೂಡಾ ಸ್ಥಳೀಯಾಡಳಿತದ ಜವಾಬ್ದಾರಿಯಾಗಿದೆ.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗಿರುವುದರಿಂದ, ಅವರು ಮಹಿಳೆಯರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಪಣತೊಡುತ್ತಾರೆ ಎಂದು ಆಶಿಸಲಾಗಿದೆ. ಆರೋಗ್ಯಕರ ಶೌಚಾಲಯ, ಸಮುದಾಯ ಶೌಚಾಲಯ ಒದಗಿಸುವುದು, ಎಲ್ಲಾ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಖಾತರಿ ಪಡಿಸಿಕೊಳ್ಳುವುದು ಕೂಡಾ ಮುಖ್ಯವಾಗಿದೆ.
ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಕೃಷಿ ಉತ್ಪಾದನೆಯನ್ನು ಸುಧಾರಿಸುವುದು, ಪಶುಸಂಗೋಪನೆ ಮತ್ತು ಗ್ರಾಮೀಣ ಕೈಗಾರಿಕೆಗಳ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಬಹಳ ಅವಶ್ಯಕವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಮತ್ತು ಉತ್ತಮ ಪ್ರಮಾಣದ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಪಂಚಾಯತ್ ಸದಸ್ಯರು ಒಗ್ಗೂಡಿ ತಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಒಂದೇ ಉದ್ದೇಶದಿಂದ ಕೆಲಸ ಮಾಡಿದರೆ ಯಾವುದೂ ಕೂಡಾ ಅಸಾಧ್ಯವಲ್ಲ ಎಂಬುದು ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನೆನೆಪಿಡಬೇಕಾಗಿದೆ.