ಬಂಟ್ವಾಳ, ಜ.06 (DaijiworldNews/PY): "ಈ ವರ್ಷ ನಮ್ಮದು ಹೋರಾಟದ ವರ್ಷ. ಕಾಂಗ್ರೆಸ್ ಪಕ್ಷದ ಬಲಸಂವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.






ಜ.6ರ ಬುಧವಾರದಂದು ಪಾಣೆಮಂಗಳೂರಿನಲ್ಲಿ ಕಾಂಗ್ರೆಸ್ ಮೈಸೂರು ವಿಭಾಗೀಯ ಮಟ್ಟದ ಪ್ರತಿನಿಧಿ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ಬಲಸಂವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು. 150 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಲಿದ್ದೇನೆ. ಪ್ರತಿ ಕ್ಷೇತ್ರವನ್ನು ನಾವು ಬಲಪಡಿಸಬೇಕು. ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಮೂಲಕ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸುತ್ತೇವೆ" ಎಂದರು.
"ಬಿಜೆಪಿಯ ಪ್ರತಿ ಕಾರ್ಯವನ್ನು ನಾವು ಗಮನಿಸಿದ್ದೇವೆ. ನಮಗೆ ಪಕ್ಷ ಸಂಘಟನೆ ಈಗ ಬಹಳ ಮುಖ್ಯ. ಬೂತ್ ಮಟ್ಟದಲ್ಲಿ ನಾವು ನಾಯಕರನ್ನು ತಯಾರು ಮಾಡಬೇಕು. ಬೂತ್ ಮಟ್ಟದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಬೇಕು" ಎಂದು ಹೇಳಿದರು.
"ಹೊಸ ನಾಯಕರನ್ನು ನಾವು ತಯಾರು ಮಾಡಬೇಕು. ನಿಮ್ಮ ಧ್ವನಿ ನನ್ನ ಧ್ವನಿಯಾಗಬೇಕು. ನಾವು ಕಾಯದೇ ಪಕ್ಷ ಸಂಘಟನೆಗೆ ಕಾರ್ಯಪ್ರವೃತ್ತರಾಗಬೇಕು. ಈ ವರ್ಷ ನಮ್ಮದು ಹೋರಾಟದ ವರ್ಷ" ಎಂದು ತಿಳಿಸಿದರು.
"ಒಂದು ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ನಡೆಸಿದಾಗ, ಅದರ ಜನರನ್ನು ತಲುಪುತ್ತದೆಯೇ ಎನ್ನುವುದು ಖಚಿತಪಡಿಸಿಕೊಳ್ಳಿ. ಸ್ವ-ಸಹಾಯ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷದ ಮೂಲ ಅಡಿಪಾಯ ನಮ್ಮ ಸಿದ್ಧಾಂತ ಹಾಗೂ ಗುರಿಯಾಗಿದೆ" ಎಂದರು.
ಏತನ್ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡ ಡಿಕೆಶಿ, "ಮೊಬೈಲ್ ಆಫ್ ಮಾಡಿ ಶಿಸ್ತು ಕಾಪಾಡಿ. ಗಂಭೀರತೆ ಇಲ್ಲದಿದ್ದರೆ ಬೇರೆ ಕಾರ್ಯಕರ್ತರಿಗೆ ಅವಕಾಶ ಕೊಡಿ" ಎಂದು ಹೇಳಿದರು.
ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹಮ್ಮದ್, ಶಾಸಕ ಯು ಟಿ ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಜೆ ಆರ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.