ಬೈಂದೂರು, ಜೂ 27 : ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗಬೇಕು. ಕರ್ನಾಟಕದಲ್ಲಿ ಬಿ,ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಪುನಃಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಅಮ್ಮನೆಡೆಗೆ ನಮ್ಮ ನಡಿಗೆ ಎನ್ನುವ ವಿಶಿಷ್ಠ ಪಾದಯಾತ್ರೆ ನೆಂಪುವಿನಿಂದ ಕೊಲ್ಲೂರಿಗೆ ಸಾಗಿಬಂತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ನೂರಾರು ಸಂಖ್ಯೆಯ ಕಾರ್ಯಕರ್ತರು ಮಂಗಳವಾರ ಶಾಸಕರ ನಿವಾಸ ನೆಂಪುವಿನಿಂದ ಕೊಲ್ಲೂರಿಗೆ ಪಾದಯಾತ್ರೆ ಮಾಡಿದರು. ಬೆಳಿಗ್ಗೆ 4.45ಕ್ಕೆ ಶಾಸಕರನ್ನು ಕೂಡಿಕೊಂಡು ಭಾರಿ ಮಳೆಯನ್ನೂ ಲೆಕ್ಕಿಸದೇ ಹೊರಟ ಕಾರ್ಯಕರ್ತರ ಪಾದಯಾತ್ರೆ ಸುಮಾರು 25 ಕಿಮಿ ಕ್ರಮಿಸಿ 9.45ರ ಹೊತ್ತಿಗೆ ಕೊಲ್ಲೂರು ಸ್ವಾಗತ ಗೋಪುರಕ್ಕೆ ತಲುಪಿತು. ಅಲ್ಲಿಂದ ನೇರವಾಗಿ ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನ ಮಾಡಿದ ಯಾತ್ರಿಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ ಅವರು, ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡಿದ್ದು, ವಿಶ್ವವೇ ಗುರುತಿಸುವಂತೆ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದೆ. ಇನ್ನು ಒಂದು ವರ್ಷ ಉಳಿದಿದ್ದು, ಮುಂದಿನ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಜನಾದೇಶ ದೊರೆತು ಇನ್ನೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ಸಂಕಲ್ಪ ಹಾಗೂ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ಪುನಃ ಸ್ಥಾಪನೆಯಾಗಬೇಕೆಂಬ ಮೂಲ ಉದ್ದೇಶದಿಂದ ಹೇಳಿಕೊಂಡ ಹರಕೆಯನ್ನು ಮೂಕಾಂಬಿಕೆ ಸನ್ನಿಧಾನಕ್ಕೆ ಅರ್ಪಿಸಲಾಗಿದೆ ಎಂದರು.
ಬಿಜೆಪಿ ಮಂಡಲದ ಪ್ರಮುಖರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮುಖಂಡರು, ವಿವಿಧ ಸ್ತರದ ಜನಪ್ರತಿನಿಧಿಗಳು, ಸಾರ್ವಜನಿಕರು ಪಾದಯಾತ್ರೆಗೆ ಸಾಥ್ ನೀಡಿದರು. ನೆಂಪುವಿನಿಂದ ಹೊರಟ ಪಾದಯಾತ್ರೆಗೆ ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರು ಬಂದು ಸೇರಿಕೊಂಡರು. ಜಟಿಜಟಿ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.