ಕಾರ್ಕಳ, ಜ.06 (DaijiworldNews/PY): "ಕಾರ್ಯಕರ್ತರು ಪಕ್ಷದ ಮೇಲೆ ಇಟ್ಟಿರುವ ನಿಷ್ಠೆ ಹಾಗೂ ಹಗಲಿರುಳು ದುಡಿದ ಪರಿಶ್ರಮದಿಂದಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸ್ವಷ್ಟ ಬಹುಮತದೊಂದಿಗೆ 34 ಗ್ರಾಮ ಪಂಚಾಯತ್ಗಳ ಪೈಕಿ 30 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರಕ್ಕೆ ಬಂದಿದೆ. 1 ಗ್ರಾಮ ಪಂಚಾಯತ್ನಲ್ಲಿ ಸಮಬಲ ಹೊಂದಿದ್ದು, ಮತ್ತೊಂದು ಗ್ರಾಮ ಪಂಚಾಯತ್ನಲ್ಲಿ ಪಕ್ಷೇತರರು ಅಧಿಕಾರಕ್ಕೇರಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗಾಗಿ ಯಾವುದೇ ಲಾಬಿ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಲಾಭಿಗೆ ಪ್ರಯತ್ನಿಸಿದವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಸಿಗದು ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಲಿದೆ" ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ಬಿಜೆಪಿ ವಿಧಾನಸಭಾ ಕ್ಷೇತ್ರದ ಸಮಿತಿ ಆಯೋಜಿಸಿದ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಬಿಜೆಪಿ ಪಕ್ಷವು ನಿಷ್ಠಾವಂತ ಕಾರ್ಯಕರ್ತರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ಮೀಸಲಾತಿಯ ಅನುಗುಣವಾಗಿ ಹಾಗೂ ಪಕ್ಷದ ಬೆಳವಣಿಗೆಗೆ ಪೂರಕವಾಗಿ ಆರ್ಹ ವ್ಯಕ್ತಿಗಳನ್ನೇ ಎರಡುವರೆ ವರ್ಷಾವಧಿಯ ಎರಡು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವು ಕಡೆ ಪಕ್ಷದೊಳಗಿನ ಸ್ಥಳೀಯ ಮಟ್ಟದ ಸಮನ್ವಯ ಕೊರತೆಯಿಂದಾಗಿ ಬಂಡಾಯ ಅಭ್ಯರ್ಥಿಗಳು ಸ್ವರ್ಧೆಗಿಳಿದು ಜಯಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಪಕ್ಷಕ್ಕಿದೆ" ಎಂದರು.
"ರಾಜ್ಯ ಮತ್ತು ಕೇಂದ್ರ ಸರಕಾರವು ಬಿಜೆಪಿಯ ಹಿಡಿತದಲ್ಲಿ ಇರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಗಮವಾಗಿದೆ. ಪ್ರತಿಯೊಂದು ಮನೆಗೆ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಿದಾಗ ಪಕ್ಷದ ಬಲವರ್ಧನೆಗೆ ಪೂರಕವಾಗಿರುತ್ತದೆ. ಪಕ್ಷದ ಎಲ್ಲ ಘಟಕಗಳು ಒಟ್ಟು ಸೇರಿ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಯೋಜನೆಗಳನ್ನು ಮನೆ ಮನೆಗಳಿಗೆ ತಲುಪಿಸಿಸಲು ಬದ್ಧವಾಗಿರಬೇಕು" ಎಂಬ ಸಲಹೆ ನೀಡಿದರು.
"ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದ ಹಲವು ಯೋಜನೆ ಹಾಗೂ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಅನುಮಾನದಿಂದಲೇ ನೋಡುತ್ತಿರುವುದರಿಂದ ಆ ಪಕ್ಷ ದೇಶ ವ್ಯಾಪ್ತಿಯಲ್ಲಿ ನೆಲ ಕಚ್ಚಲು ಕಾರಣವಾಗಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಅನುಮಾನ ಸೈನಿಕರಿಗೆ ಅವಮಾನ, ರಾಮಮಂದಿರ ತೀರ್ಪಿನ ಕುರಿತು ನ್ಯಾಯಾಲಯದ ತೀರ್ಪಿನ ಕುರಿತು ಅನುಮಾನ, ನಾಗರಿಕ ಕಾಯಿದೆ ಜಾರಿಗೊಳಿಸಲು ಮುಂದಾದಾಗ ಅದರ ಕುರಿತು ಕೊಂಕು ನುಡಿ, ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಆಶಾ ಕಾರ್ಯಕರ್ತರ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಚುನಾವಣೆಯ ಸಂದರ್ಭದಲ್ಲಿ ಫಲಿತಾಂಶ ಹೊರಬೀಳುತ್ತಿದ್ದಂತೆ ಇವಿಎಂ ಯಂತ್ರದ ಕುರಿತು ಅನುಮಾನ. ಭಾರತದ ಕೊರೊನಾ ಲಸಿಕೆಯ ಕುರಿತು ಅನುಮಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ನ ಜಾಯಾಮಾನವಾಗಿದೆ. ಆ ಪಕ್ಷಕ್ಕೆ ಕೇಂದ್ರದಿಂದ ಕಾರ್ಕಳದವರೆಗೆ ಮುಂದಾಳತ್ವವೇ ಇಲ್ಲ. ಇಂತಹ ಪರಿಸ್ಥಿತಿಯ ನಡುವೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬರಲಿದೆ ಎಂಬ ಹಗಲು ಕನಸಿನೊಂದಿಗೆ ಗೋ ಹತ್ಯೆ ನಿಷೇಧ ಹಿಂಪಡೆಯುತ್ತೇವೆ. ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ" ಎಂದು ಆರೋಪಿಸಿದರು.
ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ ಸಿ ಪಾಟೀಲ್ ಮಾತನಾಡಿ, "ಮರಳುಗಾರಿಕೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅವೀಬಜಿತ ದಕ್ಷಿಣ ಕನ್ನಡದಲ್ಲಿ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿ, ಅಧಿಕಾರಿಗಳು, ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸುವುದಕ್ಕೆ ಬದ್ಧನಾಗಿದ್ದೇನೆ. ಹಲವು ವರ್ಷಗಳಿಂದ ಎಡೆಬಿಡದೇ ಕಾಡುತ್ತಿದ್ದ ಆ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ಬೋಳ ಪ್ರಭಾಕರ ಕಾಮತ್, ಎಂ.ಕೆ.ವಿಜಯಕುಮಾರ್, ರೇಷ್ಮಾ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಬೋಳ ಜಯರಾಮ ಸಾಲ್ಯಾನ್ ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಕುಮಾರ್ ನಿರೂಪಿಸಿದರು. ನವೀನ್ ನಾಯಕ್ ಸ್ವಾಗತಿಸಿದರು.