ಮಂಗಳೂರು, ಜೂ 27 : ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಅಡ್ಯಾರ್ ನ ಕಣ್ಣೂರು ಮಸೀದಿಯ ಬಳಿ ಜೂ 27 ರ ಬುಧವಾರ ಸಂಭವಿಸಿದೆ. ಮೃತಪಟ್ಟ ಯುವಕನನ್ನು ಕಣ್ಣೂರಿನ ಸ್ಥಳೀಯ ನಿವಾಸಿ ಮೊಹಮ್ಮದ್ ಫಾರೂಕ್ (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹನೀಫ್, ಜುನೈದ್, ಸರ್ಫ್ರಾಜ್ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡ ರಾತ್ರಿ ಸುಮಾರು 1 ಗಂಟೆಗೆ ಈ ಅಪಘಾತ ಸಂಭವಿಸಿದೆ.
ತಡರಾತ್ರಿ ಒಂದು ಗಂಟೆಯ ಸಂದರ್ಭ ಸ್ಥಳೀಯ ನಿವಾಸಿಯಾದ ದ್ವಿಚಕ್ರ ಸವಾರನೊಬ್ಬ ಮಸೀದಿ ಬಳಿ ನಿಂತಿದ್ದ ಪರಿಚಯದ ಕಾರಲ್ಲಿ ಹೋಗಿ ಕುಳಿತು ಕಾರೊಳಗಿದ್ದ ಇತರ ಇಬ್ಬರು ಯುವಕರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ. ಈ ಸಂದರ್ಭ ಬಿ.ಸಿ ರೋಡ್ ಕಡೆಯಿಂದ ನೋಂದವಣೆಯಾಗದ ಹೊಸ ವೋಲ್ಸ್ ವೇಗನ್ ಪೊಲೋ ಕಾರೊಂದು ಅತಿವೇಗದಲ್ಲಿ ಬಂದು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ದ್ವಿ ಚಕ್ರ ವಾಹನ ಹಾಗೂ ಮಸೀದಿಯ ಆವರಣದೊಳಗೆ ನಿಂತಿದ್ದ ರಿಕ್ಷಾದ ಮೇಲೆ ಅಪ್ಪಳಿಸಿದೆ. ಸ್ಥಳಕ್ಕೆ ಮಂಗಳೂರು ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.