ಮಂಗಳೂರು, ಜ.07 (DaijiworldNews/PY): ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಮಿಥುನ್ ರೈ ಸೇರಿದಂತೆ ಏಳು ಮಂದಿ ಕಣದಲ್ಲಿದ್ದಾರೆ.

ಯುವ ಕಾಂಗ್ರೆಸ್ ಸ್ಥಾನಕ್ಕೆ ಪ್ರಬಲವಾದ ಆಕಾಂಕ್ಷಿಗಳಿರುವ ಕಾರಣ ಈ ಬಾರಿಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ. ಜ.10ರಿಂದ 12ರವರೆಗೆ ಆನ್ಲೈನ್ ಮೂಲಕ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಸುಮಾರು 4 ಲಕ್ಷ ಸದಸ್ಯರನ್ನು ಯುವ ಕಾಂಗ್ರೆಸ್ ಹೊಂದಿದೆ. ಎನ್.ಎ.ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ, ಮಾಧ್ಯಮ ಕೋ-ಆರ್ಡಿನೇಟರ್ ರಕ್ಷ ರಾಮಯ್ಯ, ಎನ್ಎಸ್ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿದಂತೆ ಏಳು ಮಂದಿ ಚುನಾವಣಾ ಕಣದಲ್ಲಿದ್ದಾರೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಸಮಿತಿಯು ದೆಹಲಿಯಲ್ಲಿ ಸಂದರ್ಶನ ನಡೆಸಿದ್ದು, ಅಂತಿಮವಾಗಿ ಮಿಥುನ್ ರೈ ಸೇರಿದಂತೆ ಏಳು ಮಂದಿಯನ್ನು ಆಯ್ಕೆ ಮಾಡಿತ್ತು. ಈಗಾಗಲೇ ಮಿಥುನ್ ರೈ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದ್ದಾರೆ.
ನಳಿನ್ ಕುಮಾರ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ದ.ಕ ಜಿಲ್ಲೆಗೆ ಬಿಜಪಿ ಮಹತ್ವದ ಸ್ಥಾನ ಒದಗಿಸಿದೆ. ಈಗ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷತೆಗೆ ನಡೆಯುವ ಚುನಾವಣೆಯಲ್ಲಿ ದ.ಕ ಜಿಲ್ಲೆಯವರಾದ ಮಿಥುನ್ ರೈ ಅವರು ಸ್ಪರ್ಧಿಸುತ್ತಿರುವುದು ಕೂತೂಹಲಕ್ಕೆರಳಿಸಿದೆ.