ಉಡುಪಿ, ಜ.07 (DaijiworldNews/PY): ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ವ್ಯಕ್ತಿಯೋರ್ವರಿಗೆ ಸುಮಾರು 14.15 ಕೋಟಿ ರೂ. ವಂಚನೆ ಮಾಡಿದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುಂಬೈ ಮೂಲದ ಸುರೇಶ್ ಭಂಡಾರಿ ಅವರ ಸಂಸ್ಥೆಯು ಉಡುಪಿಯ ಡಾ.ಕ್ಷಮಾ ಹೆಗ್ಡೆ, ಸುಧೀರ್ ಕುಮಾರ್ ಪಿ. ಹೆಗ್ಡೆ, ವಿಜಯ ಲಕ್ಷ್ಮೀ ಹೆಗ್ಡೆ ಅವರೊಂದಿಗೆ ಮಣಿಪಾಲದ ನಿವೇಶನವೊಂದರಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ವಿಚಾರವಾಗಿ 2008ರ ನ.24ರಂದು ಕರಾರು ಪತ್ರ ಮಾಡಿಕೊಂಡಿದ್ದರು.
ಈ ಕರಾರು ಪತ್ರ ಮಾಡಿಕೊಳ್ಳುವ ಮುನ್ನ ಆರೋಪಿಗಳು ಆ ಜಾಗದ ಬಗ್ಗೆ ಸುಳ್ಳು ದಾಖಲೆಗಳು, ನಕಾಶೆಯನ್ನು ತಯಾರು ಮಾಡಿಕೊಂಡಿದ್ದು, ದಾಖಲೆಗಳು ನೈಜ ದಾಖಲೆಗಳೆಂದು ಸರ್ಕಾರಿ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಭೂ ಪರಿವರ್ತನೆ ಮಾಡಿಕೊಂಡಿದ್ದರು. ನಂತರ ಜಂಟಿ ಅಭಿವೃದ್ದಿ ಪತ್ರದ ಕರಾರು ನಿಯಮಗಳನ್ನು ಉಲ್ಲಂಘಿಸಿ ಮಣಿಪಾಲದಲ್ಲಿರುವ ಸರ್ವೆ ನಂ. 345 ರಲ್ಲಿ 2.11 ಎಕರೆ ಭೂಮಿಯಲ್ಲಿ 0.46 ಎಕರೆ ಜಮೀನನ್ನು ದೇಣಿಗೆ ಪತ್ರದ ಮೂಲಕ ಉಡುಪಿ ಪುರಸಭೆಗೆ ನೀಡಿದ್ದರು.
ಈ ಹಿನ್ನೆಲೆ ಆ ಜಾಗದಲ್ಲಿ ಸುರೇಶ್ ಭಂಡಾರಿ ಅವರ ಸಂಸ್ಥೆಗೆ ಕಟ್ಟಡ ನಿರ್ಮಾಣ ಮಾಡಲು ಅನಾನುಕೂಲವಾಗಿದ್ದು, ಅವರ ಸಂಸ್ಥೆಗೆ ಸುಮಾರು 14.15 ಕೋಟಿ ರೂ. ನಷ್ಟವಾಗಿದೆ. ಆರೋಪಿಗಳು ಸುರೇಶ್ ಭಂಡಾರಿ ಅವರ ಸಂಸ್ಥೆಯೊಂದಿಗೆ ಮಾಡಿದ ಕರಾರು ಪತ್ರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಸಲ್ಲಿಸಿರುವ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.