ಕಾರ್ಕಳ, ಜೂ27: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೊಬ್ಬರು ಅಂಗಾಂಗ ದಾನ ಮಾಡುವ ಮೂಲಕ ಏಳು ಜನರ ಜೀವಗಳಿಗೆ ಹೊಸ ಬಾಳು ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕಾರ್ಕಳದ ರವಳನಾಥ ದೇವಸ್ಥಾನ ಸಮೀಪವಿರುವ ಮಾತೃ ನಿವಾಸದ ವಾಸುದೇವ ಭಟ್ ಅವರ ಪತ್ನಿ ನಿರ್ಮಲಾ ಭಟ್ ಅವರ ಮೆದುಳು ರಸ್ತೆ ಅಪಘಾತದಿಂದ ನಿಷ್ಕ್ರಿಯಗೊಂಡಿತ್ತು. ಇದೀಗ ಇವರ ದೇಹದ ಅಂಗಾಗಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಒಟ್ಟು ಏಳು ಮಂದಿಗೆ ನಿರ್ಮಲಾ ಭಟ್ ಹೊಸ ಜೀವನ ನೀಡಿದ್ದಾರೆ.
ಕಾರ್ಕಳದ ರವಳನಾಥ ದೇವಸ್ಥಾನ ಸಮೀಪ ತಮ್ಮ ಮನೆಯಿಂದ ತೆಳ್ಳಾರು ಕಡೆಗೆ ನಡೆದು ಹೋಗುತ್ತಿದ್ದ ನಿರ್ಮಲಾ ಅವರಿಗೆ ದ್ವಿಚಕ್ರ ವಾಹನದಲ್ಲಿ ಅತಿಯಾದ ವೇಗದಿಂದ ಬಂದ ಪ್ರಕಾಶ್ ಎನ್ನುವಾತ ಗುದ್ದಿದ್ದಾನೆ. ಈ ಅಪಘಾತದಿಂದ ನಿರ್ಮಲಾ ಅವರಿಗೆ ಗಂಭೀರವಾಗಿ ಗಾಯಗಳಾಗಿತ್ತು. ಈ ವೇಳೆ ನಿರ್ಮಲಾ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆ ತಿವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಜೂನ್ 22 ಈ ಅಪಘಾತ ಸಂಭವಿಸಿತ್ತು. ಆಸ್ಪತ್ರೆಯಲ್ಲಿ ವೈದ್ಯರು ನಿರ್ಮಲಾ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಕುಟುಂಬ ವರ್ಗದವರಿಗೆ ತಿಳಿಸಿದ್ದು, ಪತಿ ವಾಸುದೇವ ಭಟ್ ಹಾಗೂ ಕುಟುಂಬ ನಿರ್ಮಲಾ ಅವರ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ನಿರ್ಮಲಾ ಭಟ್ ಅವರ ಎರಡು ಹೃದಯ ಕವಾಟ, ಕಣ್ಣು ಗುಡ್ಡೆ, ಮೂತ್ರಪಿಂಡ ಮತ್ತು ಯಕೃತ್ತುಗಳನ್ನು ದಾನ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.